ADVERTISEMENT

ಭಾರತ ಜೋಡೊ ಯಾತ್ರೆ ಗುಜರಾತ್‌ನಿಂದ ಆರಂಭವಾಗಬೇಕಿತ್ತು: ಕಿಶೋರ್‌

ಪಿಟಿಐ
Published 20 ಸೆಪ್ಟೆಂಬರ್ 2022, 15:40 IST
Last Updated 20 ಸೆಪ್ಟೆಂಬರ್ 2022, 15:40 IST
ಪ್ರಶಾಂತ್‌ ಕಿಶೋರ್‌ ಮತ್ತು ಭಾರತ ಜೋಡೊ ಯಾತ್ರೆ
ಪ್ರಶಾಂತ್‌ ಕಿಶೋರ್‌ ಮತ್ತು ಭಾರತ ಜೋಡೊ ಯಾತ್ರೆ   

ನಾಗ್ಪುರ (ಮಹಾರಾಷ್ಟ್ರ): ಕಾಂಗ್ರೆಸ್‌ನ `ಭಾರತ್ ಜೋಡೊ ಯಾತ್ರೆ' ಗುಜರಾತ್ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯದಿಂದ ಪ್ರಾರಂಭವಾಗಬೇಕಿತ್ತು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮಂಗಳವಾರ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿದ್ದ ಪ್ರತ್ಯೇಕ ವಿದರ್ಭ ರಾಜ್ಯ ಹೋರಾಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. 'ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಗುಜರಾತ್‌ನಿಂದ ಅಥವಾ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ಇತರ ಬಿಜೆಪಿ ಆಡಳಿತದ ರಾಜ್ಯಗಳಿಂದ ಕಾಂಗ್ರೆಸ್ ತನ್ನ ‘ಭಾರತ್ ಜೋಡೊ ಯಾತ್ರೆ’ಯನ್ನು ಪ್ರಾರಂಭಿಸಿದ್ದರೆ ಉತ್ತಮವಾಗಿತ್ತು’ ಎಂದು ಕಿಶೋರ್ ಪಿಟಿಐಗೆ ಹೇಳಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ತಮಿಳುನಾಡಿನಿಂದ ಯಾತ್ರೆ ಆರಂಭವಾಗಿದೆ.

ಈ ವರ್ಷದ ಆರಂಭದಲ್ಲಿ ಕಿಶೋರ್ ಕಾಂಗ್ರೆಸ್‌ಗೆ ಸೇರುವ ಬಗ್ಗೆ ಭಾರಿ ಸುದ್ದಿಯಾಗಿತ್ತು. ಆದರೆ, ನಂತರದ ದಿನಗಳಲ್ಲಿ ಆ ಸುದ್ದಿಗಳೆಲ್ಲವೂ ಸುಳ್ಳಾದವು.

ADVERTISEMENT

ವಿದರ್ಭ ಪರ ಬೆಂಬಲಿಗರೊಂದಿಗೆ ಸಂವಾದ ನಡೆಸಿದ ಕಿಶೋರ್‌, ’ಪ್ರತ್ಯೇಕ ರಾಜ್ಯದ ಕನಸನ್ನು ನನಸಾಗಿಸಲು ಆ ಭಾಗದ ಜನರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಪೂರ್ವ ಮಹಾರಾಷ್ಟ್ರ ಪ್ರದೇಶವಾದ ವಿದರ್ಭಕ್ಕೆ ರಾಜ್ಯದ ಸ್ಥಾನಮಾನ ಒದಗಿಸುವ ಸಲುವಾಗಿ ಕಾರ್ಯತಂತ್ರ ರೂಪಿಸಲು ‌ಬಿಜೆಪಿಯ ಮಾಜಿ ಶಾಸಕ ಆಶಿಶ್ ದೇಶಮುಖ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

‘ಜನರಲ್ಲಿ ಭರವಸೆ ಇದ್ದರೆ, ಪ್ರತ್ಯೇಕ ವಿದರ್ಭ ರಾಜ್ಯದ ಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯಬಹುದು. ಆಂದೋಲನವು ಕೇಂದ್ರವನ್ನು ತಲುಪಬೇಕು. ಅದು ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರಬೇಕು’ ಎಂದು ಕಿಶೋರ್‌ ಹೇಳಿದರು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.