ಬೆಂಗಳೂರು: ಹೋಳಿ ಹಬ್ಬದಲ್ಲಿ ಬಣ್ಣ ಎರಚುವ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಅರ್ಥ ನೀಡುವ ಭಾರತ್ ಮ್ಯಾಟ್ರಿಮೋನಿ ಕಂಪನಿಯ ಇತ್ತೀಚಿನ ವಿಡಿಯೊ ಜಾಹೀರಾತು ವಿವಾದಕ್ಕೆ ಒಳಗಾಗಿದೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ–ವಿರೋಧದ ಚರ್ಚೆಗಳು ಆರಂಭವಾಗಿವೆ.
ಭಾರತ್ ಮ್ಯಾಟ್ರಿಮೋನಿಯ 75 ಸೆಕೆಂಡ್‌ನ ವಿಡಿಯೊದಲ್ಲಿ ಯುವತಿಯೊಬ್ಬರು ಬಣ್ಣ ಆಡಿ ಬಂದು ಸಿಂಕ್‌ನಲ್ಲಿ ಮುಖ ತೊಳೆಯುತ್ತಾರೆ. ಈ ವೇಳೆ ಅವರ ಬಣ್ಣ ಕಳಚಿ, ಕಣ್ಣು ಉಬ್ಬಿಕೊಂಡಿರುತ್ತೆ. ಹಾಗೂ ಮೂಗು ಮತ್ತು ಗಲ್ಲದ ಮೇಲೆ ತರಚಿದ ಗಾಯಗಳು ಕಾಣಿಸಿಕೊಳ್ಳುತ್ತವೆ. ಅವರು ಒಂದು ರೀತಿ ನೋವಿನ ಭಾವನೆ ವ್ಯಕ್ತಪಡಿಸುತ್ತಾರೆ.
‘ಕೆಲವು ಬಣ್ಣಗಳು ಸುಲಭವಾಗಿ ಮಾಸಿ ಹೋಗುವುದಿಲ್ಲ. ಹೋಳಿ ಸಂದರ್ಭದಲ್ಲಿ ಮಾಡುವ ಕಿರುಕುಳ ಮಹಿಳೆಯರಿಗೆ ಆಘಾತ ತರುತ್ತಿವೆ. ಇಂದು ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಈ ತೊಂದರೆ ಅನುಭವಿಸುತ್ತಾಳೆ ಮತ್ತು ಹೋಳಿ ಆಚರಿಸುವುದನ್ನು ನಿಲ್ಲಿಸಿದ್ದಾರೆ. ಈ ಹೋಳಿ ಹಬ್ಬದಂದು ಮಹಿಳೆಯರ ದಿನ ಆಚರಿಸೋಣ’ ಎಂದು ವಿಡಿಯೊದಲ್ಲಿ ಒಕ್ಕಣಿಕೆ ಹಾಕಲಾಗಿದೆ. ಮತ್ತು ಇದೇ ವಿಚಾರವನ್ನು ಟ್ವೀಟ್ ಕೂಡ ಮಾಡಲಾಗಿದೆ.
ಈ ವಿಡಿಯೊಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ‘ಇದು ಹಿಂದೂ ವಿರೋಧಿ ಜಾಹೀರಾತು’ ಎಂದು ಆರೋಪಿಸಿದ್ದಾರೆ. ‘ಹಿಂದೂಗಳ ಹಬ್ಬವನ್ನು ಮಹಿಳೆಯರಿಗೆ ಕಿರುಕುಳ ಎಂಬ ಸಮಾನ ಅರ್ಥದಲ್ಲಿ ಬಳಸಿರುವ ನಿಮಗೆ ದಿಕ್ಕಾರ’ ಎಂದು ಹೇಳಿದ್ದಾರೆ.
ಹಿಂದೂ ಹಬ್ಬದ ಹೆಸರಿನಲ್ಲಿ ಸಾಮಾಜಿಕ ಜಾಗೃತಿ ಎಂದು ಜಾಹೀರಾತು ಹಾಕುವುದಕ್ಕೆ ನಿಮಗೇಷ್ಟು ಧೈರ್ಯ? ಎಂದು ಕಿಡಿಕಾರಿದ್ದಾರೆ. #BoycottBharatMatrimony ಎಂದು ಟ್ವೀಟ್ ಅಭಿಯಾನ ಆರಂಭಿಸಿದ್ದಾರೆ.
ಆಕಾಶ್ ಎನ್ನುವ ವ್ಯಕ್ತಿ ಈ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿ, ‘ನಾನು ಜೀವನಪೂರ್ತಿ ಸಿಂಗಲ್ ಇರುತ್ತೇನೆ ಹೊರತು, ನಿಮ್ಮ ಭಾರತ್ ಮ್ಯಾಟ್ರಿಮೋನಿಯಲ್ಲಿ ಮದುವೆಗೆ ಹೆಸರು ನೋಂದಾಯಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹೋಳಿ ಹಬ್ಬದ ಹೆಸರಲ್ಲಿ ಹಿಂದೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಈ ಜಾಹೀರಾತಿನಲ್ಲಿ ಬಹಳ ವಿವರವಾಗಿ ಹೇಳಲಾಗಿದೆ’ ಎಂದು ಜಾಹೀರಾತಿಗೆ ಬೆಂಬಲ ಸೂಚಿಸಿ ಇನ್ನೂ ಕೆಲವರು ಟ್ವೀಟ್ ಮಾಡಿದ್ದಾರೆ.
ಭಾರತ್ ಮ್ಯಾಟ್ರಿಮೋನಿ ವಧು–ವರರನ್ನು ಅನ್ವೇಸಿಸಲು ಇರುವ ಭಾರತದ ಒಂದು ಪ್ರಮುಖ ಆನ್‌ಲೈನ್ ತಾಣವಾಗಿದೆ. ತಮಿಳುನಾಡಿನ ಮುರುಗವೇಲು ಜಾನಕಿರಾಮನ್ ಅವರು ಭಾರತ್ ಮ್ಯಾಟ್ರಿಮೋನಿ ಕಂಪನಿಯ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.