ADVERTISEMENT

ಪತ್ರಕರ್ತ ವಾಗ್ಳೆ ಮೇಲೆ ಹಲ್ಲೆ: ಪುಣೆಯಲ್ಲಿ ಬಿಜೆಪಿಯ 10 ಕಾರ್ಯಕರ್ತರ ಬಂಧನ

ಪಿಟಿಐ
Published 11 ಫೆಬ್ರುವರಿ 2024, 2:25 IST
Last Updated 11 ಫೆಬ್ರುವರಿ 2024, 2:25 IST
<div class="paragraphs"><p>ನಿಖಿಲ್ ವಾಗ್ಳೆ ಅವರ ಕಾರಿನ ಮೇಲೆ ದಾಳಿ ನಡೆದಿರುವುದು</p></div>

ನಿಖಿಲ್ ವಾಗ್ಳೆ ಅವರ ಕಾರಿನ ಮೇಲೆ ದಾಳಿ ನಡೆದಿರುವುದು

   

ಪುಣೆ: ಹಿರಿಯ ಪತ್ರಕರ್ತ ನಿಖಿಲ್ ವಾಗ್ಳೆ ಅವರ ಮೇಲೆ ನಗರದಲ್ಲಿ ಶುಕ್ರವಾರ ನಡೆದ ದಾಳಿಯನ್ನು ಸಂಪಾದಕರ ಒಕ್ಕೂಟ ಹಾಗೂ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ ಬೆನ್ನಲ್ಲೇ ಬಿಜೆಪಿಯ 10 ಕಾರ್ಯಕರ್ತರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ದೀಪಕ್ ಪೋಟೆ, ಗಣೇಶ್ ಘೋಷ್, ಗಣೇಶ್ ಶೆರ್ಲಾ, ರಾಘವೇಂದ್ರ ಮಾನಕರ್, ಸ್ವಪ್ನಿಲ್ ನಾಯ್ಕ್, ಪ್ರತೀಕ್ ದೇಸರ್ದಾ, ದುಶ್ಯಂತ್ ಮೊಹೊಲ್, ದತ್ತಾ ಸಾಗ್ರೆ, ಗಿರೀಶ್ ಮಾನ್ಕರ್ ಮತ್ತು ರಾಹುಲ್ ಪಾಯ್ಗುಡೆ ಎಂದು ಗುರುತಿಸಲಾಗಿದೆ.

ADVERTISEMENT

ಬಿಜೆಪಿಯ ಕೆಲವು ಕಾರ್ಯಕರ್ತರು ವಾಗ್ಳೆ ಅವರಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆಗೆ ಯತ್ನಿಸಿದರು. ಆ ವೇಳೆ ತಾವು ಮತ್ತು ಇನ್ನೂ ಕೆಲವರು ವಾಗ್ಳೆ ಅವರನ್ನು ರಕ್ಷಿಸಿದೆವು ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಅದರಂತೆ ನಗರದ ಪಾರ್ವತಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಶನಿವಾರ ಸಂಜೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಗ್ಳೆ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ಶುಕ್ರವಾರ ದಾಳಿ ನಡೆದಿತ್ತು.

ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ 'ಭಾರತ ರತ್ನ' ಘೋಷಣೆಯಾದ ನಂತರ ವಾಗ್ಳೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಡ್ವಾಣಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪು, ಪುಣೆಯ ಖಂಡೋಜಿ ಬಾಬಾ ಚೌಕ್‌ನಲ್ಲಿ ಕಾರನ್ನು ಅಡ್ಡ ಗಟ್ಟಿ ದಾಳಿ ಮಾಡಿತ್ತು. ಘಟನೆಯಲ್ಲಿ ಕಾರಿನ ವಿಂಡ್‌ಸ್ಕ್ರೀನ್ ಮತ್ತು ಕಿಟಕಿ ಗಾಜಿಗೆ ಹಾನಿಯಾಗಿತ್ತು.

ಬಳಿಕ ವಾಗ್ಳೆ ಪೊಲೀಸರ ರಕ್ಷಣೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.