ADVERTISEMENT

ಠಾಕೂರ್‌ಗೆ ಮರಣೋತ್ತರ ‘ಭಾರತ ರತ್ನ’: ಕೇಂದ್ರಕ್ಕೆ ಧನ್ಯವಾದ ತಿಳಿಸಿದ ತೇಜಸ್ವಿ

ಪಿಟಿಐ
Published 24 ಜನವರಿ 2024, 2:42 IST
Last Updated 24 ಜನವರಿ 2024, 2:42 IST
<div class="paragraphs"><p>ದಿ. ಕರ್ಪೂರಿ ಠಾಕೂರ್</p></div>

ದಿ. ಕರ್ಪೂರಿ ಠಾಕೂರ್

   

@dhaval241086 ಎಕ್ಸ್ ಖಾತೆ ಚಿತ್ರ

ಪಾಟ್ನಾ: ಸಮಾಜವಾದಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ (ಮರಣೋತ್ತರ) ಘೋಷಿಸಿರುವುದಕ್ಕೆ ಹಾಲಿ ಡಿಸಿಎಂ ತೇಜಸ್ವಿ ಯಾದವ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ADVERTISEMENT

‘ನಾವು ಕಳೆದ ಹಲವಾರು ವರ್ಷಗಳಿಂದ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದೇವೆ. ಠಾಕೂರ್ ಅವರು  ತಮ್ಮ ಜೀವನದುದ್ದಕ್ಕೂ ಸಮಾಜದ ದುರ್ಬಲ ಹಾಗೂ ಅಳಿವಿನಂಚಿನಲ್ಲಿದ್ದ ವರ್ಗಗಳ ಪರ ಹಾಗೂ ಬಡವರ ಅಭಿವೃದ್ಧಿಗೆ ಹೋರಾಟ ನಡೆಸಿದರು ಎಂದು ತೇಜಸ್ವಿ ಯಾದವ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕರ್ಪೂರಿ ಅವರ ಜನ್ಮಶತಮಾನೋತ್ಸವಕ್ಕೆ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ( ಜನವರಿ 23) ಈ ಘೋಷಣೆ ಮಾಡಿದರು. ‘ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಸಂತಸವಾಗುತ್ತಿದೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

1970ರ ದಶಕದ ಕೊನೆಯಲ್ಲಿ ಮುಂಗೇರಿ ಲಾಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಯತ್ನವನ್ನು ಕರ್ಪೂರಿ ಮಾಡಿದ್ದರು.  ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಈ ಅಚ್ಚರಿಯ ಆಯ್ಕೆ ನಡೆದಿದೆ. ವಿರೋಧ ಪಕ್ಷಗಳು ಸಾಮಾಜಿಕ ನ್ಯಾಯದ ವಿಷಯವನ್ನು ಅದರಲ್ಲೂ ಮುಖ್ಯವಾಗಿ ಜಾತಿ ಗಣತಿಯನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು 1952ರಲ್ಲಿ ಸಮಾಜವಾದಿ ಪಕ್ಷದ ಶಾಸಕರಾಗಿ ಬಿಹಾರ ವಿಧಾನಸಭೆ ಪ್ರವೇಶಿಸಿದ್ದರು. ಚುನಾವಣೆಯಲ್ಲಿ ಒಮ್ಮೆಯೂ ಸೋಲದ ಅವರು ಉಪಮುಖ್ಯಮಂತ್ರಿ ಹುದ್ದೆಗೇರಿದರಲ್ಲದೆ, ಬಿಹಾರದ ಮುಖ್ಯಮಂತ್ರಿಯೂ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.