ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪೂರ್ವ ರಾಜ್ಯದಿಂದ ಮತಗಳನ್ನು ಪಡೆಯಲು ನರೇಂದ್ರ ಮೋದಿ ಸರ್ಕಾರ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ಭಾನುವಾರ ಮುಂಬೈನಲ್ಲಿ ಶಿವಸೇನಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ‘ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ 26ರಷ್ಟು ಮೀಸಲಾತಿ ನೀಡುವ ಠಾಕೂರ್ ಅವರ ನಿರ್ಧಾರವನ್ನು ಬಿಜೆಪಿ ವಿರೋಧಿಸಿದೆ. ಆದರೆ ಈಗ ಲೋಕಸಭೆ ಚುನಾವಣೆಯಲ್ಲಿ ಬಿಹಾರಿಗಳ ಮತ ಸೆಳೆಯಲು ಮರಣೋತ್ತರವಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಹಲವು ವರ್ಷಗಳ ನಂತರ ಠಾಕೂರ್ ಅವರ ಕೆಲಸವನ್ನು ಗುರುತಿಸಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದು ಹೇಳಿದರು.
'ಕೇಂದ್ರ ಸರ್ಕಾರ ಡಾ.ಎಸ್ ಸ್ವಾಮಿನಾಥನ್ ಅವರ ಹೆಸರನ್ನು ಭಾರತ ರತ್ನಕ್ಕೆ ಘೋಷಿಸಿದೆ. ಆದರೆ ಕೃಷಿ ಆದಾಯವನ್ನು ಹೆಚ್ಚಿಸುವ ಕುರಿತು ಅವರ ನೇತೃತ್ವದ ಆಯೋಗವು ಮಾಡಿದ ಶಿಫಾರಸನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ' ಎಂದು ಠಾಕ್ರೆ ದೂರಿದರು.
ಐವರು ಗಣ್ಯರಿಗೆ ‘ಭಾರತ ರತ್ನ'
ಕೇಂದ್ರ ಸರ್ಕಾರ ಈ ವರ್ಷ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಐವರ ಹೆಸರನ್ನು ಘೋಷಿಸಿದೆ. ಅವರಲ್ಲಿ ಮಾಜಿ ಪ್ರಧಾನಿಗಳಾದ ಪಿ.ವಿ ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಹಾಗೂ ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ.ಎಸ್ ಸ್ವಾಮಿನಾಥನ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಬಿಜೆಪಿ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.