ನವದೆಹಲಿ: ‘ಈ ಪ್ರಶಸ್ತಿ ವ್ಯಕ್ತಿಯಾಗಿ ನನಗಷ್ಟೇ ಅಲ್ಲ, ಬದುಕಿದುದ್ದಕ್ಕೂ ನಾನು ಪಾಲಿಸಿದ ಚಿಂತನೆ ಮತ್ತು ಸಿದ್ಧಾಂತಗಳಿಗೂ ಸಂದಿರುವ ಗೌರವವಾಗಿದೆ’ ಎಂದು ಬಿಜೆಪಿಯ ಹಿರಿಯ ಧುರೀಣ ಲಾಲ್ ಕೃಷ್ಣ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.
‘ಭಾರತರತ್ನ’ ಪ್ರಶಸ್ತಿಯನ್ನು ನಾನು ನಮ್ರತೆ ಹಾಗೂ ತುಂಬು ಗೌರವದಿಂದಲೇ ಒಪ್ಪಿಕೊಳ್ಳುತ್ತಿದ್ದೇನೆ’ ಎಂದೂ ಹೇಳಿದ್ದಾರೆ. ಭಾರತರತ್ನ ಪ್ರಶಸ್ತಿ ಘೋಷಣೆಯ ಹಿಂದೆಯೇ ಅವರು ಈ ಸಂಬಂಧ ಹೇಳಿಕೆ ನೀಡಿದ್ದಾರೆ.
‘ನನ್ನ ಬದುಕು ನನ್ನದಲ್ಲ; ಈ ಬದುಕು ಇರುವುದು ದೇಶಕ್ಕಾಗಿ’ ಎಂಬ ಧ್ಯೇಯವೇ ನನಗೆ ಪ್ರೇರಕಶಕ್ತಿಯಾಗಿತ್ತು. ಪ್ರಶಸ್ತಿಯು ಸಂದಿರುವ ಈ ಹೊತ್ತಿನಲ್ಲಿ ನನ್ನ ಒಡನಾಡಿಯಾಗಿ ಕೆಲಸ ಮಾಡಿದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಮತ್ತು ಈ ಹಿಂದೆ ಇದೇ ಪ್ರಶಸ್ತಿ ಪುರಸ್ಕೃತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸುತ್ತೇನೆ’ ಎಂದು ಹೇಳಿದ್ದಾರೆ.
‘ಆರ್‌ಎಸ್‌ಎಸ್‌ಗೆ ಸೇರ್ಪಡೆಯಾದ ದಿನದಿಂದಲೂ ನನಗೆ ಹೊರಿಸಿದ ಯಾವುದೇ ಜವಾಬ್ದಾರಿಯಲ್ಲಿಯೂ ನನ್ನ ಮೆಚ್ಚಿನ ದೇಶಕ್ಕಾಗಿ ಸ್ವಾರ್ಥರಹಿತ, ಬದ್ಧತೆಯ ಸೇವೆ ಸಲ್ಲಿಸುವುದೇ ಪ್ರಶಸ್ತಿಯಾಗಬೇಕು ಎಂದೇ ನಾನು ಬಯಸಿದ್ದೆ’ ಎಂದು ಸ್ಮರಿಸಿದ್ದಾರೆ.
‘ದೇಶದ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೇ, ಸಾರ್ವಜನಿಕ ಜೀವನದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಲಕ್ಷಾಂತರ ಕಾರ್ಯಕರ್ತರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.
‘ಕುಟುಂಬದ ಸದಸ್ಯರು, ಮುಖ್ಯವಾಗಿ ಪತ್ನಿ ಕಮಲಾ ನೀಡಿದ ನೆರವನ್ನು ಸ್ಮರಿಸುತ್ತೇನೆ. ಇವರು ನನ್ನ ಜೀವನದುದ್ದಕ್ಕೂ ಪ್ರೋತ್ಸಾಹಕ ಶಕ್ತಿಯಾಗಿದ್ದರು’ ಎಂದಿದ್ದಾರೆ. ‘ಈ ಮಹೋನ್ನತ ದೇಶವು ಕೀರ್ತಿಯ ಅತ್ಯುನ್ನತ ಸ್ಥಾನವನ್ನು ತಲುಪಲಿ’ ಎಂದೂ ಆಶಿಸಿದ್ದಾರೆ.
ಅಡ್ವಾಣಿ ಅವರನ್ನು ಭಾರತ ರತ್ನಕ್ಕೆ ಆಯ್ಕೆ ಮಾಡಿದ್ದನ್ನು ಸ್ವಾಗತಿಸುತ್ತೇವೆ. ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೂ ಭಾರತರತ್ನ ಗೌರವ ನೀಡಬೇಕು ಎಂಬುದು ನಮ್ಮ ಆಗ್ರಹ.-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಆಧುನಿಕ ಭಾರತ ನಿರ್ಮಾಣ ದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಅಡ್ವಾಣಿ. ಭಾರತೀಯರ ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಟ ನಡೆಸಿದ್ದಾರೆ.-ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.