ನವದೆಹಲಿ: ಮದುವೆಯಾಗುವುದಾಗಿ ಇಲ್ಲವೇ ಉದ್ಯೋಗ ನೀಡುವುದಾಗಿ ಭರವಸೆ ನೀಡುವುದು ಸೇರಿದಂತೆ ವಂಚಿಸುವ ಮೂಲಕ ಸಂಭೋಗ ನಡೆಸುವುದನ್ನು ಅಪರಾಧೀಕರಣಗೊಳಿಸುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 69 ಅನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶಗಳು ಹೆಚ್ಚು ಎಂದು ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಎನ್‌ಎಸ್‌ನ ಈ ಸೆಕ್ಷನ್, ಭಾರಿ ಸಂಖ್ಯೆಯಲ್ಲಿ ಪ್ರಕರಣಗಳನ್ನು ದಾಖಲಿಸಲು ಸಹ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ.
ಇದು, ಈ ಹಿಂದಿನ ಐಪಿಸಿ ಸೆಕ್ಷನ್ 498(ಎ) ಆಗಿತ್ತು. ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಸಾವಿರಾರು ಮಹಿಳೆಯರಿಗೆ ಈ ಇದು ನೆರವಾಗಿದ್ದ ಕಾರಣ, ಈ ಸೆಕ್ಷನ್‌ಅನ್ನು ಪ್ರಗತಿಪರ ನಡೆ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಈ ಸೆಕ್ಷನ್‌ಅಡಿ ದಾಖಲಾಗುವ ಪ್ರಕರಣದಲ್ಲಿ, ತಾನು ನಿರಪರಾಧಿ ಎಂಬುದಾಗಿ ಸಾಬೀತುಪಡಿಸುವುದು ಆರೋಪಿಗೆ ಕಷ್ಟವಾಗಲಿದೆ ಎಂಬುದು ಕಾನೂನುತಜ್ಞರ ವಾದ.
‘ಈ ಸೆಕ್ಷನ್‌ನ ವ್ಯಾಖ್ಯಾನ ವಿಶಾಲವಾಗಿರುವ ಕಾರಣ ದುರ್ಬಳಕೆ ಮಾಡಲಾಗುತ್ತದೆ ಎಂಬುದನ್ನು ಒಪ್ಪಲಾಗದು’ ಎಂದು ಹಿರಿಯ ವಕೀಲ ವಿವೇಕ್ ಟಂಕಾ ಹೇಳುತ್ತಾರೆ.
ಈ ಮಾತನ್ನು ಒಪ್ಪದ ಮತ್ತೊಬ್ಬ ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವನಿ, ‘ಮಹಿಳೆಯನ್ನು ಹಕ್ಕುಗಳನ್ನು ಮೊಟಕುಗೊಳಿಸುವ ವಿಪರೀತವಾದ ಸೆಕ್ಷನ್ ಇದಾಗಿದೆ’ ಎನ್ನುತ್ತಾರೆ.
‘ಉದ್ಯೋಗ ಅಥವಾ ಬಡ್ತಿ ಇಲ್ಲವೇ ಮದುವೆಯಾಗುವ ಭರವಸೆ ಸಿಕ್ಕಾಗ ಮಹಿಳೆಯರು ಹಾಸಿಗೆ ಹಂಚಿಕೊಳ್ಳಲು ತಕ್ಷಣವೇ ಮುಂದಾಗುತ್ತಾರೆ ಎಂಬ ಅರ್ಥವ್ಯಾಪ್ತಿಯನ್ನು ಈ ಸೆಕ್ಷನ್ ಹೊಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.