ಲಖನೌ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ಕಾಲ ದೆಹಲಿಯ ಗಡಿಗಳಲ್ಲಿ ನಡೆದಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ‘ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)’ ಇಬ್ಭಾಗವಾಗಿದೆ. ‘ಯೂನಿಯನ್’ನ ಒಂದು ತಂಡವು ‘ರಾಜಕೀಯೇತರ ಭಾರತೀಯ ಕಿಸಾನ್ ಯೂನಿಯನ್’ ಎಂಬ ಹೊಸ ಸಂಘಟನೆ ಹುಟ್ಟುಹಾಕಿರುವುದಾಗಿ ತಿಳಿಸಿದೆ.
ಅಧ್ಯಕ್ಷ ಸ್ಥಾನದಿಂದ ನರೇಶ್ ಟಿಕಾಯತ್ ಮತ್ತು ರಾಷ್ಟ್ರೀಯ ವಕ್ತಾರನ ಸ್ಥಾನದಿಂದ ರಾಕೇಶ್ ಟಿಕಾಯತ್ ಅವರನ್ನು ತೆರವುಗೊಳಿಸಲಾಗಿದೆ ಎಂದು ‘ರಾಜಕೀಯೇತರ ಬಿಕೆಯು’ ನಾಯಕರು ತಿಳಿಸಿದ್ದಾರೆ.
ಬಿಕೆಯು ಸಂಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್ ಅವರ 11ನೇ ಪುಣ್ಯ ತಿಥಿ ಸಂದರ್ಭದಲ್ಲೇ ಈ ಘೋಷಣೆ ಮಾಡಲಾಗಿದೆ.
‘ನಮ್ಮದು ಬಿಕೆಯು. ನರೇಶ್ ಟಿಕಾಯತ್ ಮತ್ತು ರಾಕೇಶ್ ಟಿಕಾಯತ್ ನೇತೃತ್ವದ ಬಿಕೆಯು ರಾಜಕೀಯ ಸಂಘಟನೆಯಾಗಿ ಪರಿವರ್ತನೆಗೊಂಡಿದೆ. ಯಾವುದೇ ರಾಜಕೀಯ ಅಜೆಂಡಾ ಹೊಂದದಂತೆ ಟಿಕಾಯತ್ ಸಹೋದರರ ಮನವೊಲಿಸಲು ನಾವು ಪ್ರಯತ್ನಿಸಿದ್ದೆವು. ಆದರೆ ಅವರು ನಮ್ಮ ಸಲಹೆಯನ್ನು ಸ್ವೀಕರಿಸಲಿಲ್ಲ’ ಎಂದು ಬಿಕೆಯು (ರಾಜಕೀಯೇತರ) ನೂತನ ಅಧ್ಯಕ್ಷ ರಾಜೇಶ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಈ ಸಂಘಟನೆಯ ರಾಷ್ಟ್ರೀಯ ವಕ್ತಾರನನ್ನಾಗಿ ಧರ್ಮೇಂದ್ರ ಮಲಿಕ್ ಅವರನ್ನು ನೇಮಕ ಮಾಡಲಾಗಿದೆ.
‘ನಾವು ಯಾವುದೇ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪರಿಗಣಿಸುತ್ತೇವೆ’ ಎಂದು ಚೌಹಾಣ್ ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ನಿರ್ದಿಷ್ಟ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುವಂತೆ ಟಿಕಾಯತ್ ಸಹೋದರರು ಪದೇಪದೇ ಹೇಳಿದ್ದರು. ನಾವದನ್ನು ತಿರಸ್ಕರಿಸಿದ್ದೆವು. ಟಿಕಾಯತ್ ಸಹೋದರರು ಬಹುತೇಕ ಪ್ರತ್ಯೇಕವಾಗಿದ್ದಾರೆ. ಬಹುಸಂಖ್ಯಾತ ಸದಸ್ಯರು ನಮ್ಮ (ಬಿಕೆಯು ರಾಜಕೀಯೇತರ) ಜತೆಗಿದ್ದಾರೆ ಎಂದೂ ಚೌಹಾಣ್ ತಿಳಿಸಿದ್ದಾರೆ.
ಸಂಘಟನೆ ಇಬ್ಭಾಗವಾಗುವುದನ್ನು ತಪ್ಪಿಸಲು ರಾಕೇಶ್ ಟಿಕಾಯತ್ ಸಾಕಷ್ಟು ಪ್ರಯತ್ನಿಸಿದ್ದರು. ಹೊಸ ಸಂಘಟನೆ ರಚಿಸದಂತೆ ಚೌಹಾಣ್ ಮತ್ತು ಇತರ ನಾಯಕರ ಮನವೊಲಿಸಲು ಎರಡು ದಿನಗಳ ಕಾಲ ಲಖನೌನಲ್ಲೇ ಬೀಡುಬಿಟ್ಟಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.