ಹಾಥರಸ್: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಭೇಟಿಯಾದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಸಂತ್ರಸ್ತೆಯ ಕುಟುಂಬಕ್ಕೆ 'ವೈ ಶ್ರೇಣಿ ಭದ್ರತೆ' ನೀಡುವಂತೆ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಚಂದ್ರಶೇಖರ್ ಒತ್ತಾಯಿಸಿದ್ದು, 'ಕುಟುಂಬಕ್ಕೆ ವೈ ಶ್ರೇಣಿ ಭದ್ರತೆ ನೀಡದಿದ್ದರೆ ಅವರನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ. ಅವರಿಗೆ ಇಲ್ಲಿ ಸುರಕ್ಷತೆ ಇಲ್ಲ' ಎಂದಿದ್ದಾರೆ.
'ನಟಿ ಕಂಗನಾ ರನೌತ್ ಅವರಿಗೆ ವೈ ಶ್ರೇಣಿ ಭದ್ರತೆ ಸಿಗುವುದಾದರೆ, ಆ ಕುಟುಂಬಕ್ಕೆ ಏಕೆ ಕೊಡುವುದಿಲ್ಲ? ಅತ್ಯಾಚಾರ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಚಾರಣೆ ನಡೆಸಲಿ' ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
'ಹಾಥರಸ್‌ನ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆ ನಡೆಸಬೇಕು' ಎಂದು ಸಂತ್ರಸ್ತೆಯ ಸೋದರ ಸಹ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಕರಣದ ಸಿಬಿಐ ತನಿಖೆಗೆ ಶನಿವಾರ ಶಿಫಾರಸು ಮಾಡಿದ್ದಾರೆ.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಹಾಥರಸ್‌ನ 19 ವರ್ಷ ವಯಸ್ಸಿನ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ದೆಹಲಿಯ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 29ರಂದು ಸಾವಿಗೀಡಾದರು. ಪ್ರಕರಣದಲ್ಲಿನ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.