ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಮಹೇಶ್ ರಾವುತ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಎರಡು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎಸ್.ವಿ.ಎನ್ ಭಟ್ಟಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು ಇದೇ ವೇಳೆ, ಜುಲೈ10 ರಂದು ಕಡ್ಡಾಯವಾಗಿ ಎನ್‌ಐಎ ಕಚೇರಿಗೆ ತೆರಳಿ ಶರಣಾಗುವಂತೆ ರಾವುತ್ ಅವರಿಗೆ ಸೂಚಿಸಿದೆ.
ಅರ್ಜಿದಾರರ ಅಜ್ಜಿಯ ಅಂತಿಮ ಸಂಸ್ಕಾರ ಈಗಾಗಲೇ ನಡೆದಿದೆ. ಹಾಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಎನ್‌ಐಎ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರಾದ ಅಪರ್ಣಾ ಭಟ್, ಇದೇ 29, 30 ರಂದು ಹಾಗೂ ಜು. 5 ಮತ್ತು 6 ರಂದು ಅರ್ಜಿದಾರರ ಅಜ್ಜಿಯ ಅಂತಿಮ ವಿಧಿ–ವಿಧಾನ ಕಾರ್ಯಗಳು ನಡೆಯಲಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ವಾದ–ಪ್ರತಿವಾದಗಳನ್ನು ಆಲಿಸಿದ ಪೀಠ, ಜೂ.26ರಿಂದ ಜು.9ರ ವರೆಗೆ ರಾವುತ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು. ವಿಶೇಷ ಎನ್‌ಐಎ ನ್ಯಾಯಾಲಯ ನಿಗದಿಪಡಿಸಿರುವ ಎಲ್ಲ ನಿಬಂಧನೆಗಳು ಹಾಗೂ ಷರತ್ತುಗಳನ್ನು ಮಧ್ಯಂತರ ಜಾಮೀನು ಒಳಗೊಂಡಿರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.