ADVERTISEMENT

ವಾರ್ ಅಂಡ್ ಪೀಸ್ ಪುಸ್ತಕವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೇ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 4:11 IST
Last Updated 30 ಆಗಸ್ಟ್ 2019, 4:11 IST
   

ಮುಂಬೈ: ಲಿಯೊ ಟಾಲ್‌ಸ್ಟಾಯ್ ಅವರ ವಾರ್ ಅಂಡ್‌ ಪೀಸ್ ಪುಸ್ತಕದ ಬಗ್ಗೆಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ವಾರ್ ಅಂಡ್ ಪೀಸ್ ಪುಸ್ತಕವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಕೆಲವರು ತಮ್ಮ ಬಳಿ ಇರುವಪುಸ್ತಕದ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ಇನ್ನು ಕೆಲವರು ಪುಸ್ತಕವನ್ನು ಡೌನ್‌ಲೋಡ್ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಅಂದಹಾಗೆ ವಾರ್ ಅಂಡ್ ಪೀಸ್ ಪುಸ್ತಕ ಇದ್ದಕ್ಕಿದ್ದಂತೆಯೇ ಚರ್ಚೆ ಹುಟ್ಟು ಹಾಕಲು ಕಾರಣವಾಗಿದ್ದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯವರ ಹೇಳಿಕೆ.

ಗೂಗಲ್ ಟ್ರೆಂಡ್ಸ್
ಹುಡುಕಿದ ವಿಷಯಗಳು

ವಿಷಯ ಏನು?

ADVERTISEMENT

2018ರಲ್ಲಿ ನಡೆದ ಭೀಮಾ ಕೋರೆಗಾಂವ್ ಸಂಘರ್ಷ ಪ್ರಕರಣದ ಕುರಿತು ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ವಿಚಾರಣೆ ವೇಳೆಪ್ರಕರಣದ ಆರೋಪಿ ವೆರ್ನಾನ್ ಗೊನ್ಸಾಲ್ವೆಸ್ ಅವರಲ್ಲಿ ನ್ಯಾಯಮೂರ್ತಿ ಸಾರಂಗ್ ಕೋತ್ವಾಲ್ ಅವರು ವಾರ್ ಅಂಡ್ ಪೀಸ್ ಪುಸ್ತಕ, ಸಿಡಿ ಮೊದಲಾದ ಆಕ್ಷೇಪಾರ್ಹ ವಸ್ತುಗಳನ್ನು ಮನೆಯಲ್ಲಿ ಯಾಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂಬುದು ಸುದ್ದಿಯಾಗಿತ್ತು.

ಸಾರಂಗ್ ಕೋತ್ವಾಲ್ ಅವರ ಏಕ ಸದಸ್ಯ ನ್ಯಾಯಪೀಠವು ಗೊನ್ಸಾಲ್ವೆಸ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆಯನ್ನು ಕೇಳಿದೆ.

ಕಳೆದ ವರ್ಷ ವೆರ್ನಾನ್ ಗೊನ್ಸಾಲ್ವೆಸ್ ಅವರನ್ನು ಬಂಧಿಸಿದ ಪುಣೆ ಪೊಲೀಸರು ಅವರ ಮನೆಯನ್ನು ಶೋಧ ಮಾಡಿದ್ದರು. ಈ ವೇಳೆ, ಕಬೀರ್ ಕಲಾ ಮಂಚ್ ಬಿಡುಗಡೆ ಮಾಡಿದ್ದ ರಾಜ್ಯ ಧಮನ್ ವಿರೋಧಿ ಎಂಬ ಸಿಡಿ, ಮಾರ್ಕ್ಸಿಸ್ಟ್ಆರ್ಕೈವ್ಸ್, ಜೈ ಭೀಮ್ ಕಾಮ್ರೇಡ್, ವಾರ್ ಅಂಡ್ ಪೀಸ್, ಅಂಡರ್‌ಸ್ಟ್ಯಾಂಡಿಂಗ್ಮಾವೋಯಿಸ್ಟ್ ಅಂಡ್ ಆರ್‌ಸಿಪಿ ರಿವ್ಯೂ ಮತ್ತು ನ್ಯಾಷನಲ್ ಸ್ಟಡಿ ಸರ್ಕಲ್‌ನ ಸುತ್ತೋಲೆಯ ಪ್ರತಿಗಳು ಲಭಿಸಿದ್ದವು.

ರಾಜ್ಯ ಧಮನ್ ವಿರೋಧಿ ಎಂಬ ಸಿಡಿಯ ಶೀರ್ಷಿಕೆಯಿಂದಲೇ ಗೊತ್ತಾಗುತ್ತದೆ ಅದು ರಾಜ್ಯ ವಿರೋಧಿ ಎಂದು. ವಾರ್ ಅಂಡ್ ಪೀಸ್ ಎಂಬುದು ಇನ್ನೊಂದು ದೇಶದಲ್ಲಿನ ಯುದ್ಧದ ಬಗ್ಗೆ ಇರುವ ಪುಸ್ತಕ. ಈ ರೀತಿಯ ಆಕ್ಷೇಪಾರ್ಹ ಪುಸ್ತಕಗಳನ್ನು ನೀವು ಯಾಕೆ ಮನೆಯಲ್ಲಿಟ್ಟುಕೊಂಡಿದ್ದೀರಿ? ನೀವು ಇದನ್ನು ನ್ಯಾಯಾಲಯದಲ್ಲಿ ವಿವರಿಸಬೇಕು ಎಂದು ನ್ಯಾಯಮೂರ್ತಿ ಕೋತ್ವಾಲ್ ವಿಚಾರಣೆ ವೇಳೆ ಆದೇಶಿಸಿದ್ದರು.

ಯಾರು ಈ ಗೊನ್ಸಾಲ್ವೆಸ್?
ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ವಿರೋಧಿ ಚಟುವಟಿಕೆ (ತಡೆ) ಕಾಯ್ದೆಯಡಿಯಲ್ಲಿ ಬಂಧಿತ ವ್ಯಕ್ತಿಯಾಗಿದ್ದಾರೆ ವೆರ್ನಾನ್ ಗೊನ್ಸಾಲ್ವೆಸ್.

ಗೊನ್ಸಾಲ್ವೆಸ್ ಅವರು 2017 ಡಿಸೆಂಬರ್ 31 ರಂದು ಪರಿಷದ್‌ನಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣದಿಂದಾಗಿ ಮರುದಿನ ಭೀಮಾ ಕೋರೆಗಾಂವ್‌ನಲ್ಲಿ 200ನೇ ವಾರ್ಷಿಕೋತ್ಸವದ ವೇಳೆ ಹಿಂಸಾಚಾರ ನಡೆದಿದೆಎಂದು ಪೊಲೀಸರು ಆರೋಪಿಸಿದ್ದಾರೆ.

ಪರಿಷದ್ ಆಯೋಜಿಸುವಲ್ಲಿ ನಕ್ಸಲರ ಕೈವಾಡ ಕೂಡಾ ಇದೆ ಎಂದು ಆರೋಪಿಸುತ್ತಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿಸಾಮಾಜಿಕ ಕಾರ್ಯಕರ್ತ ಶೋಮಾ ಸೇನ್, ರೋನಾ ವಿಲ್ಸನ್, ಸುಧಾ ಭಾರದ್ವಾಜ್, ಅರುಣ್ ಫರೇರಾ ಮತ್ತು ಗೌತಂ ನವ್‌ಲಂಕಾ ಮೊದಲಾದವರನ್ನು ಪೊಲೀಸರು ಬಂಧಿಸಿದ್ದರು.

ಇತರರ ಕಂಪ್ಯೂಟರ್‌ನಿಂದ ಪತ್ತೆಯಾದ ಕೆಲವು ಇಮೇಲ್ ಮತ್ತು ಪತ್ರಗಳನ್ನುಆಧರಿಸಿ ಪುಣೆ ಪೊಲೀಸರು ಗೊನ್ಸಾಲ್ವೆಸ್ ವಿರುದ್ಧಕೇಸು ದಾಖಲಿಸಿದ್ದಾರೆ ಎಂದು ಗೊನ್ಸಾಲ್ವೆಸ್ ಅವರ ಪರವಾದಿಸುವ ನ್ಯಾಯವಾದಿ ಮಿಹಿರ್ ದೇಸಾಯಿ ಹೈಕೋರ್ಟ್‌ನಲ್ಲಿ ಹೇಳಿದ್ದಾರೆ.

ಈ ಇಮೇಲ್ ಅಥವಾ ಪತ್ರಗಳನ್ನು ಗೊನ್ಸಾಲ್ವೆಸ್ ಬರೆದಿಲ್ಲ,ಅವರನ್ನುಉದ್ದೇಶಿಸಿಯೂ ಬರೆದದ್ದಲ್ಲ. ಅವರ ವಿರುದ್ಧಯಾವುದೇ ಪ್ರಮುಖ ಸಾಕ್ಷ್ಯಾಧಾರವಿಲ್ಲದೆ ಅವರಿಗೆ ಜಾಮೀನು ನಿರಾಕರಿಸಬಾರದು ಎಂದು ದೇಸಾಯಿ ಹೇಳಿದ್ದರು.

ಇದನ್ನೂ ಓದಿ:ಕೋರೆಗಾಂವ್‌ ಶೋಷಿತರ ವಿಜಯದ ರೂಪಕ

ಪುಣೆ ಪೊಲೀಸ್ ಪರವಾಗಿ ವಾದಿಸುತ್ತಿರುವ ನ್ಯಾಯವಾದಿ ಅರುಣಾ ಪೈ ಅವರುಗೊನ್ಸಾಲ್ವೆಸ್ ಅವರ ಮನೆಯಿಂದ ಪೊಲೀಸರಿಗೆ ಯಾವುದೇಎಲೆಕ್ಟ್ರಾನಿಕ್ ಸಾಕ್ಷ್ಯಗಳು ಸಿಗಲಿಲ್ಲ. ಆದರೆ ಮೇಲೆ ಹೇಳಿದಂತೆ ಆಕ್ಷೇಪಾರ್ಹ ಹೆಸರಿರುವ ಸಿಡಿ ಮತ್ತು ಪುಸ್ತಕಗಳು ಸಿಕ್ಕಿವೆ ಎಂದಿದ್ದಾರೆ.

ಇದನ್ನು ಪ್ರಶ್ನಿಸಿದ ದೇಸಾಯಿ, ಈ ರೀತಿಯ ಪುಸ್ತಕ ಮತ್ತು ಸಿಡಿಗಳನ್ನು ಇಟ್ಟುಕೊಂಡಿದ್ದ ಮಾತ್ರಕ್ಕೆ ಗೊನ್ಸಾಲ್ವೆಸ್ ಅವರನ್ನು ಉಗ್ರ ಎಂದು ಹೇಳಲಾಗುವುದಿಲ್ಲ ಅಥವಾ ನಿಷೇಧಿತ ಮಾವೋವಾದಿ ಗುಂಪಿಗೆ ಸೇರಿದವರು ಎಂದು ಹೇಳಲಾಗುವುದಿಲ್ಲ ಎಂದು ವಾದಿಸಿದ್ದಾರೆ

ಆದಾಗ್ಯೂ, ಈ ರೀತಿಯ ಪುಸ್ತಕಗಳನ್ನು ಇಟ್ಟುಕೊಳ್ಳುವುದರಿಂದ ಯಾರೊಬ್ಬರನ್ನೂ ಉಗ್ರ ಎಂದು ಮುದ್ರೆಯೊತ್ತಲಾಗುವುದಿಲ್ಲ ಎಂಬ ವಾದವನ್ನು ಒಪ್ಪಿದ ನ್ಯಾಯಮೂರ್ತಿ ಕೋತ್ವಾಲ್, ಈ ರೀತಿಯ ಪುಸ್ತಕ ಮತ್ತು ಸಿಡಿಗಳನ್ನು ಮನೆಯಲ್ಲಿ ಯಾಕೆ ಇಟ್ಟುಕೊಂಡರು ಎಂಬುದನ್ನು ವಿವರಿಸಬೇಕು ಎಂದು ಹೇಳಿದ್ದಾರೆ.

ಗೊನ್ಸಲ್ವೆಸ್ ಅವರ ಮನೆಯಿಂದ ವಶಪಡಿಸಿದಪುಸ್ತಕ ಮತ್ತು ಸಿಡಿಗಳು ಆಕ್ಷೇಪಾರ್ಹ ಎಂಬುದನ್ನು ಪುಣೆ ಪೊಲೀಸರು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು ಎಂದಿದ್ದಾರೆ ಕೋತ್ವಾಲ್.

ಗೊನ್ಸಲ್ವೆಸ್ಅವರ ಮನೆಯಿಂದ ವಶ ಪಡಿಸಿಕೊಂಡಿರುವ ಸಿಡಿ, ಪುಸ್ತಕ ಮತ್ತು ಕೈ ಪಿಡಿಯಲ್ಲಿರುವ ವಿಷಯಕ್ಕೂ ಪ್ರಕರಣಕ್ಕೂ ಸಂಬಂಧವಿದೆ ಎಂಬುದನ್ನು ಸಾಬೀತು ಪಡಿಸಲುಪೊಲೀಸರು ವಿಫಲರಾಗಿದ್ದಾರೆ. ಆಕ್ಷೇಪಾರ್ಹ ಶೀರ್ಷಿಕೆಯನ್ನು ಹೊಂದಿದೆಎಂದು ಹೇಳಿದರೆ ಸಾಲದು. ಆ ಸಿಡಿಯನ್ನು ಪರೀಕ್ಷಿಸಿದ್ದೀರಾ? ಅದು ಖಾಲಿಯಾಗಿದ್ದರೆ ಏನು ಮಾಡುತ್ತೀರಿ ಎಂದು ನ್ಯಾಯಮೂರ್ತಿ ಕೇಳಿದ್ದಾರೆ.

ಈ ವಸ್ತುಗಳಲ್ಲಿರುವ ವಿಷಯ ಮತ್ತು ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದರೆ ಅದನ್ನು ನಿರಾಕರಿಸಬೇಕಾಗುತ್ತದೆ ಎಂದು ಕೋತ್ವಾಲ್ ಹೇಳಿದ್ದಾರೆ. ಅದೇ ವೇಳೆ ಇಮೇಲ್ ಮತ್ತು ಪತ್ರಗಳ ಮೂಲ ಮತ್ತು ವಿವರಗಳನ್ನು ಸಲ್ಲಿಸುವಂತೆ ನ್ಯಾಯಪೀಠವು ಪೊಲೀಸರಿಗೆ ಆದೇಶಿಸಿದೆ.

ವಶಪಡಿಸಿಕೊಂಡ ಎಲ್ಲ ಪುಸ್ತಕಗಳ ಮೇಲೆ ದೋಷಾರೋಪ ಮಾಡಿಲ್ಲ
ವಾರ್ ಅಂಡ್ ಪೀಸ್ ಪುಸ್ತಕವನ್ನು ಯಾಕೆ ಮನೆಯಲ್ಲಿಟ್ಟುಕೊಂಡಿದ್ದೀರಿ ಎಂದು ಗೊನ್ಸಲ್ವೆಸ್‌ ಅವರಲ್ಲಿ ನ್ಯಾಯಮೂರ್ತಿ ಹೇಳಿದ್ದಾರೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಗುರುವಾರ ಪ್ರಸ್ತುತ ಜಾಮೀನು ಅರ್ಜಿಯ ವಿಚಾರಣೆ ನಡೆದಾಗ,ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಕೋತ್ವಾಲ್ ಅವರು ಲಿಯೊ ಟಾಲ್‌ಸ್ಟಾಯ್ ಅವರ ವಾರ್ ಅಂಡ್ ಪೀಸ್ ಪುಸ್ತಕ, ಸಾಹಿತ್ಯ ಕೃತಿ ಎಂಬುದು ನನಗೆ ಗೊತ್ತಿದೆ. ಆರೋಪಿ ಮನೆಯಿಂದ ವಶ ಪಡಿಸಲಾದ ಎಲ್ಲ ಪುಸ್ತಕಗಳ ಮೇಲೆ ದೋಷಾರೋಪ ಮಾಡಿಲ್ಲ ಎಂದು ಹೇಳಿರುವುದಾಗಿ ಮುಂಬೈ ಮಿರರ್ ವರದಿ ಮಾಡಿದೆ.

ಗೊನ್ಸಲ್ವೆಸ್ ಅವರ ಮನೆಯಿಂದ ವಶ ಪಡಿಸಿಕೊಂಡಿರುವ ಪುಸ್ತಕಗಳು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಅಡಿಯಲ್ಲಿ ನಿಷೇಧಕ್ಕೊಳಪಟ್ಟವು ಅಲ್ಲ ಎಂದು ಗೊನ್ಸಾಲ್ವೆಸ್ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ವಶ ಪಡಿಸಿಕೊಂಡಿರುವ ಪುಸ್ತಕ ನಿಷೇಧಿತ ಪುಸ್ತಕಗಳಲ್ಲ ಎಂದು ನೀವು ಹೇಳಿದ್ದೀರಿ. ನಿನ್ನೆ ನಾನು ಆರೋಪಪಟ್ಟಿಯಲ್ಲಿರುವ ಎಲ್ಲ ವಿಷಯವನ್ನುಓದುತ್ತಿದ್ದೆ. ತುಂಬ ಕಳಪೆ ಕೈಬರಹದಿಂದ ಅದನ್ನು ಬರೆಯಲಾಗಿದೆ. ವಾರ್ ಅಂಡ್ ಪೀಸ್ ನನಗೆ ಗೊತ್ತು. ಪೊಲೀಸರು ಸಾಕ್ಷ್ಯ ಎಂದು ಹೇಳಿ ಸಲ್ಲಿಸಿರುವ ಇಡೀ ಪಟ್ಟಿ ಬಗ್ಗೆ ನಾನು ಪ್ರಶ್ನಿಸುತ್ತಿದ್ದೆ ಎಂದು ನ್ಯಾಯಮೂರ್ತಿಕೋತ್ವಾಲ್ ಹೇಳಿದ್ದಾರೆ.

ಆದಾಗ್ಯೂ, ಬುಧವಾರ ನ್ಯಾಯಮೂರ್ತಿಉಲ್ಲೇಖಿಸಿದ ಪುಸ್ತಕ ವಾರ್ ಅಂಡ್ ಪೀಸ್ ಇನ್ ಜಂಗಲ್‌ಮಹಲ್: ಪೀಪಲ್, ಸ್ಟೇಟ್ ಅಂಡ್ ಮಾವೋಯಿಸ್ಟ್ ಎಂಬುದು. ಅದರ ಸಂಪಾದಕರು-ಬಿಸ್ವಜಿತ್ ರಾಯ್ . ಆದರೆ ಮಾಧ್ಯಮಗಳು ನ್ಯಾಯಮೂರ್ತಿ ಕೋತ್ವಾಲ್, ಲಿಯೊ ಟಾಲ್‌ಸ್ಟಾಯ್ ಅವರ ವಾರ್ ಅಂಡ್ ಪೀಸ್ ಪುಸ್ತಕವನ್ನು ಪ್ರಶ್ನಿಸಿದ್ದಾರೆ ಎಂದು ತಪ್ಪಾಗಿ ವರದಿ ಮಾಡಿದ್ದವು ಎಂದು ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪರ ವಾದಿಸುತ್ತಿರುವ ವಕೀಲ ಯುಗ್ ಚೌಧರಿ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.