ADVERTISEMENT

ಭೀಮಾ ಕೊರೆಗಾಂವ್‌ ವಿಜಯೋತ್ಸವ: ಪುಣೆಯಲ್ಲಿ ಇಂಟರ್‌ನೆಟ್ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 9:33 IST
Last Updated 1 ಜನವರಿ 2020, 9:33 IST
ಭೀಮಾ ಕೊರೆಗಾಂವ್ ವಿಜಯ ಸ್ತಂಭ (ಟ್ವಿಟರ್ ಚಿತ್ರ)
ಭೀಮಾ ಕೊರೆಗಾಂವ್ ವಿಜಯ ಸ್ತಂಭ (ಟ್ವಿಟರ್ ಚಿತ್ರ)   

ಪುಣೆ: 1818ರಲ್ಲಿ ನಡೆದ ಆಂಗ್ಲೋ- ಮರಾಠಾ ಯುದ್ಧದ ವಿಜಯೋತ್ಸವದ ವರ್ಷಾಚರಣೆಗಾಗಿಭೀಮಾ ಕೊರೆಗಾಂವ್‌ನಲ್ಲಿ ಸುಮಾರು 5 ಲಕ್ಷದಲಿತರು ಸೇರಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವಾಗ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಪುಣೆ ಜಿಲ್ಲಾಡಳಿತವು ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿಸುವುದನ್ನು ತಡೆಯುವುದಕ್ಕಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಪುಣೆ ಜಿಲ್ಲಾಧಿಕಾರಿ ನವಲ್ ಕಿಶೋರ್ ರಾಮ್ ಹೇಳಿದ್ದಾರೆ. ಅದೇ ವೇಳೆ ಜನರನ್ನು ನಿಯಂತ್ರಿಸುವುದಕ್ಕಾಗಿ ಹೆಚ್ಚಿನ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದಿದ್ದಾರೆ.

ಭೀಮಾ ಕೊರೆಗಾಂವ್‌ನಲ್ಲಿ ಸುಮಾರು 5 ಲಕ್ಷ ಜನ ಸೇರಿದ್ದಾರೆ ಎಂದು ಪೊಲೀಸ್ ವಿಶೇಷಾಧಿಕಾರಿ (ಕೋಲ್ಹಾಪುರ್ ವಲಯ) ಸುಹಾಸ್ ವಾಡ್ಕೆ ಹೇಳಿದ್ದಾರೆ. ಕಳೆದ ವರ್ಷ ಇದೇ ದಿನ ಸುಮಾರು 10 ಲಕ್ಷ ಮಂದಿ ಇಲ್ಲಿ ಸೇರಿದ್ದಾರೆ.

ADVERTISEMENT

ಪ್ರತಿ ವರ್ಷ ಮಹಾರಾಷ್ಟ್ರದಾದ್ಯಂತವಿರುವ ದಲಿತರು ಭೀಮಾ ಕೊರೆಗಾಂವ್‌ನಲ್ಲಿರುವ ಜೈ ಸ್ತಂಭದ ಬಳಿ ಸೇರುತ್ತಾರೆ. 1818 ಜನವರಿ 1 ರಂದು ಈಸ್ಟ್ ಇಂಡಿಯಾ ಕಂಪನಿಯ ಸೇನೆಯು ದಲಿತ ಸಮುದಾಯದವರ ಸಹಾಯದಿಂದ ಪೇಶ್ವೆಗಳನ್ನು ಪರಾಭವಗೊಳಿಸಿದ್ದರು. ದಲಿತರು ಪೇಶ್ವೆಗಳ ವಿರುದ್ಧ ಹೋರಾಡಿ ಗೆದ್ದ ಈ ಯುದ್ಧದ 202ನೇ ವರ್ಷದ ಆಚರಣೆ ಬುಧವಾರ ನಡೆಯುತ್ತಿದೆ.

ಭೀಮಾ ಕೊರೆಗಾಂವ್ ಯುದ್ಧ (ಮಹರ್ ಕ್ರಾಂತಿ)

‘1818ರಲ್ಲಿ ಬ್ರಿಟಿಷ್ ಆಡಳಿತದ ಎರಡನೇ ಬೆಟಾಲಿಯನ್‌ನ ಮೊದಲ ರೆಜಿಮೆಂಟ್‌ನಲ್ಲಿ 17 ಪೂನಾ ಕುದುರೆಗಳು ಮತ್ತು ಮದ್ರಾಸ್ ಕ್ಯಾನನ್‌ನ 25 ಯೋಧರ ಜತೆ ಬಾಂಬೆಯ 500 ಯೋಧರನ್ನೊಳಗೊಂಡ ಬಾಂಬೆ ಇನ್‌ಫಾಂಟ್ರಿಯೂ ಇತ್ತು. ಇದರಲ್ಲಿ ಬಹುತೇಕರು ಪರಿಶಿಷ್ಟ ಜಾತಿಗಳಾದ ಮಹರ್‌, ಮರಾಠ ಕ್ರೈಸ್ತರು ಮತ್ತು ಬಹುಜನ ಸಮುದಾಯದವರಾಗಿದ್ದರು. ಇವರು 20,000 ಕುದುರೆ ಪಡೆ ಮತ್ತು 8,000 ಯೋಧರಿದ್ದ ಮಹಾರಾಷ್ಟ್ರ ಆಡಳಿತದ ಸೇನೆಯನ್ನು ಸೋಲಿಸಿದ್ದರು. 1818ರ ಜನವರಿ 1ರಂದು ಮಹರ್ ಯೋಧರ ಪಡೆಯು ಮಹಾರಾಷ್ಟ್ರ ಆಡಳಿತದ ಸೇನೆಯ 600 ಪೇಶ್ವೆ ಯೋಧರನ್ನು ಹತ್ಯೆ ಮಾಡಿದ್ದರು. ಉಳಿದ ಪೇಶ್ವೆ ಯೋಧರು ಪಲಾಯಗೈದಿದ್ದರು. ಬ್ರಿಟಿಷ್ ಪಡೆಯ ಸುಮಾರು 200 ಯೋಧರೂ ಮೃತಪಟ್ಟಿದ್ದರು. ಇದರಲ್ಲಿ 22 ಮಹರ್, 16 ಮರಾಠರು, 8 ರಜಪೂತರು ಮತ್ತು ತಲಾ ಇಬ್ಬರು ಮುಸ್ಲಿಂ, ಕ್ರೈಸ್ತ ಯೋಧರಿದ್ದರು’ ಎಂದು ದಲಿತ ಹೋರಾಟಗಾರ ಸುಧೀರ್ ಧವಲೆ ತಿಳಿಸಿದ್ದಾರೆ.

‘ಭೀಮಾ ನದಿ ತೀರದಲ್ಲಿ ಯುದ್ಧ ನಡೆದ ಪ್ರದೇಶಕ್ಕೆ 1918ರ ಜನವರಿ 1ರಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿದ್ದರು. ನಂತರ ಪ್ರತಿ ವರ್ಷ ಜನವರಿ 1ರಂದು ದಲಿತರು ಮತ್ತು ಬಹುಜನರು ಯುದ್ಧದ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

1918ರ ನಂತರ ಪ್ರತೀ ವರ್ಷ ಜನವರಿ 1ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊರೆಗಾಂವ್‍ಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದರು. ದೇಶದಲ್ಲಿರುವ ಅಸ್ಪೃಶ್ಯತೆಯ ವಿರುದ್ಧದ ಹೋರಾಟಕ್ಕೆ ಮಹರ್ ದಲಿತರ ಹೋರಾಟ ಸ್ಫೂರ್ತಿಯಾಗಬೇಕು ಎಂದು ಅಂಬೇಡ್ಕರ್ ಹೇಳುತ್ತಿದ್ದರು. 1927 ಜನವರಿ 1ರಂದು ಅಂಬೇಡ್ಕರ್ ಅವರು ಕೊರೆಗಾಂವ್‍ನಲ್ಲಿ ಬೃಹತ್ ಸಮ್ಮೇಳನ ಆಯೋಜಿಸಿ ಮಹರ್ ಯೋಧರ ಹೋರಾಟವನ್ನು ಜನರಿಗೆ ತಿಳಿಯುವಂತೆ ಮಾಡಿದ್ದರು.

ದಲಿತರು ಪೇಶ್ವೆಗಳ ವಿರುದ್ಧ ಸಿಡಿದೆದ್ದಿದ್ದೇಕೆ?
ಪುಣೆಯ ಆಡಳಿತ ವರ್ಗವಾಗಿದ್ದ ಪೇಶ್ವೆಗಳು ಮಹರ್ ಜಾತಿಯವರನ್ನು ಶೋಷಣೆಗೊಳಪಡಿಸಿದ್ದ ಕಾಲವದು. ಪೇಶ್ವೆಗಳ ವಿರುದ್ಧ ಸಿಡಿದೇಳಲು ಮಹರ್ ಜನಾಂಗ ಸಿದ್ಧವಾಗಿತ್ತು. ಅಷ್ಟೊತ್ತಿಗೆ ಬ್ರಿಟಿಷ್ ಸೇನೆ ಮಹರ್ ಜನರನ್ನು ತಮ್ಮ ಸೇನೆಯೊಂದಿಗೆ ಸೇರಿಸಿಕೊಂಡು ಅವರಿಗೆ ತರಬೇತಿ ನೀಡಲು ಆರಂಭಿಸಿತು.

ಮಹರ್ ಜನರನ್ನು ಬಳಸಿ ಪೇಶ್ವೆಗಳ ವಿರುದ್ಧ ಹೋರಾಡುವುದು ಬ್ರಿಟಿಷರ ಉದ್ದೇಶವಾಗಿತ್ತು. ಬ್ರಿಟಿಷರು ತಮ್ಮ ದೇಶದವರ ವಿರುದ್ಧವೇ ತಮ್ಮನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಕೂಡಲೇ ಮಹರ್ ಯೋಧರ ತಂಡದ ನಾಯಕ ಪೇಶ್ವೆಗಳಿಗೆ ಈ ಸುದ್ದಿಯನ್ನು ಮುಟ್ಟಿಸುತ್ತಾನೆ. ನಮ್ಮನ್ನೂ ನಿಮ್ಮ ಸೇನೆಗೆ ಸೇರಿಸಿಕೊಳ್ಳಿ ಎಂದು ಬಿನ್ನವಿಸಿಕೊಳ್ಳುತ್ತಾನೆ. ಆದರೆ ಕೀಳು ಜಾತಿಯವರಾದ ನಿಮ್ಮನ್ನು ಸೇನೆಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ನೀವು ನಮ್ಮ ಪಾದದ ಧೂಳಿಗೆ ಸಮ ಎಂದು ಪೇಶ್ವೆಗಳು ತಿರಸ್ಕರಿಸುತ್ತಾರೆ.

ಶೋಷಣೆ, ದೌರ್ಜನ್ಯಗಳಿಂದ ಬೇಸತ್ತು ಹೋಗಿದ್ದ ಮಹರ್ ಜನಾಂಗ ಕ್ರಾಂತಿಯ ಕಹಳೆ ಮೊಳಗಿಸುತ್ತದೆ. ಹಾಗೆ 500 ಸೈನಿಕರಿದ್ದ ಮಹರ್ ಸೇನೆ, ಹತ್ತಾರು ಸಾವಿರ ಯೋಧರನ್ನೊಳಗೊಂಡ ಪೇಶ್ವೆ ಸೇನೆಯನ್ನು ಯುದ್ಧದಲ್ಲಿ ಸೋಲಿಸುತ್ತದೆ. ಇದು ಅಸ್ಪೃಶ್ಯತೆಯ ವಿರುದ್ಧ ನಡೆದ ಹೋರಾಟವಾಗಿತ್ತು.

ಪುಣೆಯ ಭೀಮಾ ನದಿ ತೀರದಲ್ಲಿರುವ ಕೊರೆಗಾಂವ್ ಎಂಬಲ್ಲಿ ಈ ಯುದ್ಧ ನಡೆದಿತ್ತು. ಬಾಂಬೆ ನೇಟಿವ್ ಲೈಟ್ ಇನ್‍ಫಾಂಟ್ರಿಯ ಬಾಂಬೆ ರೆಜಿಮೆಂಟ್‍ನ ಮಹರ್ ಯೋಧರು ಮತ್ತು ಪೇಶ್ವೆ ಸೇನೆಯ ನಡುವೆ ನಡೆದ ಯುದ್ಧವಾಗಿತ್ತು ಅದು. ಅನ್ನ, ನೀರು ಇಲ್ಲದೆ ಶಿರೂರು ಎಂಬಲ್ಲಿಂದ 27 ಮೈಲುಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಭೀಮ ಕೊರೆಗಾಂವ್‍ಗೆ ಮಹರ್ ಯೋಧರು ಬಂದಿದ್ದರು. ಮುಂದಿನ 12 ಗಂಟೆಗಳಲ್ಲಿ ನಡೆದ ಯುದ್ಧದಲ್ಲಿ ಮಹರ್ ಯೋಧರು ಪೇಶ್ವೆಗಳ ಸೇನೆಯನ್ನು ಪರಾಭವಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.