ನವದೆಹಲಿ: ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂದು ಹೆಸರು ಘೋಷಿಸಲಾಗಿದ್ದ ಭೋಜಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು, ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಭಾನುವಾರ ಘೋಷಿಸಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ನನ್ನನ್ನು ಅಸನ್ಸೋಲ್ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಭಾರತೀಯ ಜನತಾ ಪಕ್ಷದ ಉನ್ನತ ನಾಯಕರಿಗೆ ನನ್ನ ತುಂಬು ಹೃದಯದ ಧನ್ಯವಾದ. ಆದರೆ, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ, 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಬಿಜೆಪಿ, ಅಸನ್ಸೋಲ್ ಕ್ಷೇತ್ರದಿಂದ ಪವನ್ ಅವರ ಹೆಸರನ್ನು ಘೋಷಿಸಿತ್ತು. ಸದ್ಯ, ಈ ಕ್ಷೇತ್ರವನ್ನು ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಪ್ರತಿನಿಧಿಸುತ್ತಿದ್ದಾರೆ.
ಪವನ್ ಸಿಂಗ್ ಅವರಿಗೆ ಟಿಕೆಟ್ ನೀಡುವ ಬಿಜೆಪಿ ನಿರ್ಧಾರವನ್ನು ಟೀಕಿಸಿದ್ದ ಟಿಎಂಸಿ ಸಂಸದ ಸಾಕೇತ್ ಗೋಖಲೆ, ಸ್ತ್ರೀದ್ವೇಷದ, ಅಶ್ಲೀಲ ಮತ್ತು ಬೆಂಗಾಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಪವನ್ ವಿಡಿಯೊ ಮಾಡುತ್ತಾರೆ ಎಂದು ಆರೋಪಿಸಿದ್ದರು.
‘ಪಶ್ಚಿಮ ಬಂಗಾಳದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸ್ತ್ರೀದ್ವೇಷದ ಮತ್ತು ಅಶ್ಲೀಲ ವಿಡಿಯೊ ಮಾಡುತ್ತಿರುವುದಕ್ಕಾಗಿ ಪವನ್ ಸಿಂಗ್ ಅವರನ್ನು ಕಣಕ್ಕಿಳಿಸಲು ಬಿಜೆಪಿಯು ಮುಂದಾಗಿದೆ’ ಎಂದು ಅವರು ಆರೋಪಿಸಿದ್ದರು.
ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಕೆಲ ಸಮಯದ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅಭಿಷೇಕ್ ಬ್ಯಾನರ್ಜಿ, ಇದು ಪಶ್ಚಿಮ ಬಂಗಾಳ ಜನತೆಯ ಅದಮ್ಯ ಸ್ಫೂರ್ತಿ ಮತ್ತು ಶಕ್ತಿಯ ಪ್ರತೀಕ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.