ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ, ಬಿಜೆಪಿಯ ತಾರಾ ಪ್ರಚಾರಕ ಶಿವರಾಜ್ ಸಿಂಗ್ ಚೌಹಾಣ್ ಅವರು ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿ ತಿರುಗಾಡುತ್ತಾ ನಾಲ್ಕನೇ ಅವಧಿಗೆ ಆಶೀರ್ವಾದ ಮಾಡಿ ಎಂದು ಕೋರುತ್ತಿರಬೇಕಾದರೆ ಇದೇ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳು ಚುನಾವಣಾ ಆಟವನ್ನು ಅಂಗಣದ ಹೊರಗೆ ನಿಂತು ನೋಡುತ್ತಿದ್ದಾರೆ.
ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ್ ಸಿಂಗ್ ಮೌನದ ಮೊರೆ ಹೋಗಿದ್ದಾರೆ; ದಿಗ್ವಿಜಯ್ ಅವರನ್ನು ಸೋಲಿಸಿ ಬಿಜೆಪಿಯನ್ನು ಆಡಳಿತಕ್ಕೆ ತಂದ ಉಮಾಭಾರತಿ ಮುಖ್ಯಮಂತ್ರಿಯಾಗಿದ್ದರು. ಆದರೆ ಈಗ ಅವರು ಮೂಲೆಗುಂಪಾಗಿದ್ದಾರೆ; ಉಮಾ ಮತ್ತು ಶಿವರಾಜ್ ನಡುವಣ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಾಬುಲಾಲ್ ಗೌರ್ ಮುನಿಸಿಕೊಂಡಿದ್ದಾರೆ.
1993ರಿಂದ 2003ರವರೆಗೆ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ್ ಅವರು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ತಲೆನೋವಾಗಿದ್ದೇ ಹೆಚ್ಚು. ಆದರೆ, ಈ ಬಾರಿ ‘ತಲೆನೋವು ನಿವಾರಕ’ವಾಗಿ ಕೆಲಸ ಮಾಡುತ್ತಿದ್ದಾರೆ. ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪಾತ್ರ ಹಿನ್ನೆಲೆಗಷ್ಟೇ ಸೀಮಿತ. ಮಧ್ಯ ಪ್ರದೇಶದ ಎಲ್ಲಿಯೂ ಅವರ ಪೋಸ್ಟರ್‌ಗಳು, ಕಟೌಟ್‌ಗಳು ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ತಾವಿಲ್ಲ ಎಂಬುದನ್ನು ಅವರು ಈಗಾಗಲೇ ಘೋಷಿಸಿಬಿಟ್ಟಿದ್ದಾರೆ.
‘ನಾನು ಮಾತನಾಡಿದರೆ ಕಾಂಗ್ರೆಸ್ ಮತ ಕಳೆದುಕೊಳ್ಳುತ್ತದೆ. ಹಾಗಾಗಿ ಸಮಾವೇಶಗಳಲ್ಲಿ ಭಾಗವಹಿಸುತ್ತಿಲ್ಲ’ ಎಂದು ದಿಗ್ವಿಜಯ್ ಒಮ್ಮೆ ಹೇಳಿದ್ದರು. ಗಟ್ಟಿಯಾದ ಜಾತ್ಯತೀತ ನಿಲುವು ಹೊಂದಿರುವ ವ್ಯಕ್ತಿ ಎಂಬ ಹೆಸರು ಅವರಿಗೆ ಇದೆ. ಹಾಗೆಯೇ, ಮುಸ್ಲಿಮರನ್ನು ಓಲೈಸುತ್ತಾರೆ ಎಂಬ ಆರೋಪ ಅವರ ಮೇಲೆ ಸದಾ ಇದ್ದೇ ಇದೆ. ಮತ ಗಳಿಕೆಗಾಗಿ ದೇವಸ್ಥಾನ ಸುತ್ತಾಟ ಮತ್ತು ಗೋಶಾಲೆ ಸ್ಥಾಪನೆಗೆ ಕಾಂಗ್ರೆಸ್ ಮುಂದಾಗಿರುವ ಪೂರ್ಣ ಧ್ರುವೀಕರಣಗೊಂಡ ಸನ್ನಿವೇಶದಲ್ಲಿ ದಿಗ್ವಿಜಯ್ ಅವರಿಗೆ ಮಹತ್ವದ ಪಾತ್ರವೇನೂ ಇರುವುದು ಸಾಧ್ಯವಿಲ್ಲ.
2003ರ ಚುನಾವಣೆಯಲ್ಲಿ 230ರಲ್ಲಿ 173 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಉಮಾಭಾರತಿ ಗೆಲ್ಲಿಸಿದ್ದರು. 15 ವರ್ಷಗಳ ಬಳಿಕ 2018ರಲ್ಲಿ ಆಗಿನ ಉಮಾಭಾರತಿಯ ದುರ್ಬಲ ನೆರಳಾಗಿ ಮಾತ್ರ ಅವರು ಇದ್ದಾರೆ. ಚುನಾವಣಾ ಕಾರ್ಯತಂತ್ರ, ಯೋಜನೆ ಯಾವುದರಲ್ಲಿಯೂ ಈ ನಾಯಕಿಗೆ ಈಗ ಪಾತ್ರ ಇಲ್ಲ. ಭಾರತೀಯ ಜನಶಕ್ತಿ ಪಕ್ಷ ಕಟ್ಟಿ ಆರು ವರ್ಷ ಹೊಸ ಪ್ರಯೋಗಕ್ಕೆ ಒಡ್ಡಿಕೊಂಡ ಅವರು 2011ರಲ್ಲಿ ಬಿಜೆಪಿಗೆ ಮರಳಿದರು. 2008ರ ಚುನಾವಣೆಯಲ್ಲಿ ಅವರ ಪಕ್ಷ ಹೀನಾಯವಾಗಿ ಸೋತಿತ್ತು. ಟೀಕಮ್‌ಗಡ ಕ್ಷೇತ್ರದಲ್ಲಿ ಉಮಾ ಕೂಡ ಸೋತಿದ್ದರು. ಬಿಜೆಪಿಗೆ ಮರಳಿದ ಬಳಿಕ ಅವರಿಗೆ ಹಿಂದಿನ ಲಯ ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ.
ನೆಲ, ಜಲ, ಅರಣ್ಯ ಮತ್ತು ಜಾನುವಾರು ಅವರ ಆಡಳಿತದ ಕೇಂದ್ರ ಬಿಂದುವಾಗಿತ್ತು ಎಂಬುದನ್ನು ಹಲವರು ನೆನಪಿಸಿಕೊಳ್ಳುತ್ತಾರೆ. ರಸ್ತೆಯಲ್ಲಿ ಸಾಗುತ್ತಿದ್ದಾಗ ಬೀದಿ ದನಗಳನ್ನು ಕಂಡರೆ ವಾಹನದಿಂದ ಇಳಿದು ಅವುಗಳನ್ನು ಅಪ್ಪಿಕೊಳ್ಳುತ್ತಿದ್ದ ಫೋಟೊಗಳು ಹಲವು ಬಾರಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
88 ವರ್ಷದ ಬಾಬುಲಾಲ್ ಗೌರ್ ಅವರು 14 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಚತುರ ತಿರುಗೇಟುಗಳು ಮತ್ತು ಸಿಟ್ಟಿಗೆ ಅವರು ಪ್ರಸಿದ್ಧ. ಚೌಹಾಣ್ ಸಚಿವ ಸಂಪುಟದಿಂದ ವಯಸ್ಸಿನ ಕಾರಣಕ್ಕೆ 2016ರಲ್ಲಿ ಗೌರ್ ಅವರನ್ನು ವಜಾ ಮಾಡಲಾಯಿತು. ಗೋವಿಂದಪುರ ವಿಧಾನಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಲಾಗುವುದಿಲ್ಲ ಮತ್ತು ಅವರ ಸಂಬಂಧಿಕರನ್ನೂ ಕಣಕ್ಕೆ ಇಳಿಸಲಾಗುವುದಿಲ್ಲ ಎಂದಾಗ ಗೌರ್ ಕೆರಳಿದ್ದರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಬಿಜೆಪಿ ಸೋಲುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಪರಿಣಾಮವಾಗಿ ಸೊಸೆ ಕೃಷ್ಣಾ ಗೌರ್‌ಗೆ ಬಿಜೆಪಿ ಟಿಕೆಟ್ ಸಿಕ್ಕಿತು.
ಬಿಜೆಪಿಯಲ್ಲಿ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದು ಅವರ ಬಹುದೊಡ್ಡ ಆರೋಪ. ಅವರು ಬಾಯಿ ತೆರೆದಾಗಲೆಲ್ಲ ಬಿಜೆಪಿ ಬೆಂಕಿ ಶಮನದ ಕೆಲಸ ಮಾಡಬೇಕಾಗುತ್ತದೆ. ಹೆಚ್ಚಾಗಿ ಭೋಪಾಲ್‌ನಲ್ಲಿಯೇ ಇರುವ ಗೌರ್, ಈ ಬಾರಿ ಸೊಸೆ ಸ್ಪರ್ಧಿಸುತ್ತಿರುವ ಗೋವಿಂದಪುರದಿಂದ ಹೊರಗೆ ಹೋಗಿಯೇ ಇಲ್ಲ. ಕಾಂಗ್ರೆಸ್‌ನ ಹಿರಿಯ ಮುಖಂಡ ಅರ್ಜುನ್ ಸಿಂಗ್ ತಮಗೆ ಆತ್ಮೀಯರಾಗಿದ್ದರು. ಹಾಗಾಗಿ, ತಮ್ಮ ವಿರುದ್ಧ ಕಾಂಗ್ರೆಸ್ ಎಂದೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಯೇ ಇಲ್ಲ ಎಂದೂ ಗೌರ್ ಒಮ್ಮೆ ಹೇಳಿದ್ದರು.
ಮತಯಂತ್ರಕ್ಕೆ ಕನ್ನ ವದಂತಿ: ನಿದ್ದೆಗೆಟ್ಟ ‘ಕೈ’ ಅಭ್ಯರ್ಥಿಗಳು
ರಾಯಪುರ: ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಕನ್ನ ಹಾಕುವ ಮೂಲಕ ಮತಗಳನ್ನು ಬದಲಾವಣೆ ಮಾಡಲು ನವದೆಹಲಿಯಿಂದಛತ್ತೀಸಗಡ ರಾಜ್ಯಕ್ಕೆ ಹ್ಯಾಕರ್‌ಗಳು ಬಂದಿದ್ದಾರೆ ಎಂಬ ವದಂತಿ ಕಾಂಗ್ರೆಸ್ ಅಭ್ಯರ್ಥಿಗಳ ನಿದ್ರೆಗೆಡಿಸಿದೆ.
ಭದ್ರತಾ ಕೊಠಡಿಗಳ (ಸ್ಟ್ರಾಂಗ್ ರೂಂ) ಆವರಣದಲ್ಲಿಯೇ ಬಿಡಾರ ಹೂಡಲು ಕೆಲವು ಅಭ್ಯರ್ಥಿಗಳು ತಮ್ಮ ಎಜೆಂಟರನ್ನು ನಿಯೋಜಿಸಿದ್ದಾರೆ.
ಛತ್ತೀಸಗಡ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆದಿದೆ. ಡಿಸೆಂಬರ್ 11ರಂದು ಮತ ಎಣಿಕೆ ನಡೆಯಲಿದೆ. ಎಲ್ಲ ಇವಿಎಂಗಳನ್ನು ಆಯಾ ಜಿಲ್ಲಾ ಕೇಂದ್ರಗಳ ಮತ ಎಣಿಕೆ ಕೇಂದ್ರಗಳ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಈ ಕೊಠಡಿಗಳಿಗೆ ಚುನಾವಣಾ ಆಯೋಗವು ಬೀಗ ಹಾಕಿ, ಮುದ್ರೆ ಒತ್ತಿದೆ. ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಹ್ಯಾಕರ್‌ಗಳು ಬಂದಿದ್ದಾರೆ ಎಂಬ ವದಂತಿ ಹರಡುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳು ನಿದ್ರೆ ಮರೆತಿದ್ದಾರೆ. ಭದ್ರತಾ ಕೊಠಡಿಗಳಿಗೆ ಜಾಮರ್ ಅಳವಡಿಸುವಂತೆಯೂ ಕಾಂಗ್ರೆಸ್ ನಾಯಕರು ಆಯೋಗವನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ಈ ವದಂತಿಗೆ ಹೆಚ್ಚಿನ ಗಮನ ಹರಿಸಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳು ಭದ್ರತಾ ಕೊಠಡಿಗಳ ಆವರಣದಲ್ಲಿಯೇ ಇರಲು ಮುಖ್ಯ ಚುನಾವಣಾಧಿಕಾರಿಯಿಂದ ಅನುಮತಿ ಕೇಳುತ್ತಿದ್ದಾರೆ. ಭದ್ರತಾ ಕೊಠಡಿಗಳಿಗೆ ಅಭ್ಯರ್ಥಿಗಳು ನಿಯಮಿತವಾಗಿ ಬಂದು ಹೋಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ಸುದ್ದಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಿದ್ರೆಗೆಡಿಸಿದೆ. ಬಿಜೆಪಿಯ ಮಾಜಿ ಶಾಸಕ ಯುದ್ಧವೀರ್ ಸಿಂಗ್ ಜುದೇವ್ ಅವರು ‘ಚುನಾವಣೆ ಮುಗಿದ ಎರಡು ತಿಂಗಳ ನಂತರ ಮತ್ತೆ ಉಪ ಚುನಾವಣೆ ನಿರೀಕ್ಷಿಸಿ. ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ನನಗೆ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಯುದ್ಧವೀರ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ, ಅವರ ಪತ್ನಿಗೆ ನೀಡಿತ್ತು. ಈ ಪೋಸ್ಟ್‌ನಿಂದ ಉಭಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಯಾರು ಕ್ಷೇತ್ರ ಬಿಟ್ಟುಕೊಡಲಿದ್ದಾರೆ ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ.
ಮುಸ್ಲಿಮರಿರುವಲ್ಲಿ ಯೋಗಿ ಪ್ರಚಾರ
ಅಲ್ವರ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜಸ್ಥಾನದಲ್ಲಿ 11 ರ್‍ಯಾಲಿಗಳಲ್ಲಿ ಮಾತನಾಡಲಿದ್ದಾರೆ. ಅವುಗಳ ಪೈಕಿ ಆರು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳು. ಈ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ಟಿಕೆಟ್ ಕೊಟ್ಟಿದೆ. ಇದಲ್ಲದೆ, ಇತರ ಕ್ಷೇತ್ರಗಳು ಕೂಡ ಮುಸ್ಲಿಮರ ಸಂಖ್ಯೆ ಹೆಚ್ಚು ಇರುವ ಕ್ಷೇತ್ರಗಳು ಎಂದು ಬಿಜೆಪಿಯ ಮೂಲಗಳು ಹೇಳಿವೆ.
ಗುಂಪು ದಾಳಿ ಹತ್ಯೆಗಳು ನಡೆದ ಅಲ್ವರ್ ಮತ್ತು ಭರತ್‌ಪುರ ಇರುವ ಮೇವಾಟ್ ಪ್ರಾಂತ್ಯದಲ್ಲಿ ಯೋಗಿ ಪ್ರಚಾರ ನಡೆಸಲಿದ್ದಾರೆ. ಗುಂಪು ದಾಳಿ ಹತ್ಯೆಗಳ ಬಳಿಕ ಈ ಪ್ರದೇಶದಲ್ಲಿ ಎರಡು ಧರ್ಮದ ಜನರ ನಡುವೆ ಭಾರಿ ಕಂದಕವೇ ಉಂಟಾಗಿದೆ.
ದರ್ಗಾ, ಮಂದಿರದಿಂದ ರಾಹುಲ್ ಪ್ರಚಾರ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜಸ್ಥಾನ ಪ್ರಚಾರವು ದರ್ಗಾ ಮತ್ತು ದೇವಸ್ಥಾನದ ಮೂಲಕ ಆರಂಭವಾಗಲಿದೆ. ಸೋಮವಾರದಿಂದ ಅವರ ಪ್ರಚಾರ ಶುರುವಾಗಲಿದೆ. ಅಜ್ಮೀರ್, ಜಾಲೋರ್ ಮತ್ತು ಜೋಧಪುರಗಳಲ್ಲಿ ಅವರು ಪ್ರಚಾರ ಮಾಡಲಿದ್ದಾರೆ. ಅಜ್ಮೀರ್ ದರ್ಗಾ ಮತ್ತು ಪುಷ್ಕರ್ ಮಂದಿರಕ್ಕೆ ಅವರು ಭೇಟಿ ಕೊಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.