ADVERTISEMENT

ಭೋಪಾಲ್ ಅನಿಲ ದುರಂತ: ಪರಿಹಾರ ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:45 IST
Last Updated 12 ಜನವರಿ 2023, 19:45 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ನೀಡುವ ಪರಿಹಾರ ಒಪ್ಪಂದದ ಮೊತ್ತ ಹೆಚ್ಚಿಸಬೇಕು ಎಂಬುದಕ್ಕೆ ಒಪ್ಪಂದ ಏರ್ಪಟ್ಟ 1989ರ ನಂತರ ಈವರೆಗೆ ರೂಪಾಯಿಯ ಮೌಲ್ಯ ಕುಗ್ಗಿದೆ ಎಂಬುದನ್ನು ಮಾನದಂಡವಾಗಿ ಪರಿಗಣಿಸಬಾರದು ಎಂದು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್‌ (ಯುಸಿಸಿ) ಸಂಸ್ಥೆಯ ಉತ್ತರಾಧಿಕಾರ ಸಂಸ್ಥೆಗಳು ಗುರುವಾರ ಪ್ರತಿಪಾದಿಸಿವೆ.

ಸಂತ್ರಸ್ತರಿಗೆ ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ವಿತರಿಸಲು ಹೆಚ್ಚುವರಿ ₹ 7,844 ಕೋಟಿ ನೀಡುವಂತೆ ಯುಸಿಸಿನ ಉತ್ತರಾಧಿಕಾರ ಸಂಸ್ಥೆಗಳಿಗೆ ಆದೇಶಿಸಬೇಕು ಎಂದು ಕೇಂದ್ರ ಸರ್ಕಾರ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿತ್ತು. 1984ಲ್ಲಿ ನಡೆದಿದ್ದ ಈ ಅನಿಲ ದುರಂತದಲ್ಲಿ 3000ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಪರಿಸರದ ಮೇಲೂ ತೀವ್ರ ಪ್ರಮಾಣ ಬೀರಿತ್ತು.

ಈ ಸಂಬಂಧಿತ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್‌ನ ಪೀಠವು ಕಾಯ್ದಿರಿಸಿದೆ. ನ್ಯಾಯಮೂರ್ತಿ ಸಂಜಯ್ ಕಿಷನ್ ಕೌಲ್‌ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಅಭಯ್‌ ಎಸ್‌. ಓಕಾ, ವಿಕ್ರಂ ನಾಥ್‌, ಜೆ.ಕೆ.ಮಾಹೇಶ್ವರಿ ಅವರು ಇತರೆ ಸದಸ್ಯರಾಗಿದ್ದಾರೆ.

ADVERTISEMENT

ಪ್ರತಿವಾದಿ ಸಂಸ್ಥೆಗಳ ಪರ ಹಾಜರಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ, ‘ಪರಿಹಾರ ಒಪ್ಪಂದ ಏರ್ಪಟ್ಟ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ಹಂತದಲ್ಲಿ ಪರಿಹಾರ ಮೊತ್ತ ಸಮರ್ಪಕವಾಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರಲಿಲ್ಲ’ ಎಂದು ವಾದ ಮಂಡಿಸಿದರು.

1989ರ ಪರಿಸ್ಥಿತಿಗೂ ಈಗಿನದಕ್ಕೂ ಹೋಲಿಸಿ, ರೂಪಾಯಿ ಮೌಲ್ಯ ಕುಸಿದಿರುವುದು ಪರಿಹಾರ ಏರಿಕೆಗೆ ಮಾನದಂಡ ಆಗುವುದಿಲ್ಲ. ಆಗ ಜಿಲ್ಲಾ ಕೋರ್ಟ್ ₹ 715 ಕೋಟಿ ಪರಿಹಾರ ಕುರಿತು ಆದೇಶ ನೀಡಿದ್ದರಿಂದಾಗಿ ಈ ಮೊತ್ತದ ಪರಿಹಾರ ಒಪ್ಪಂದವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.