ನವದೆಹಲಿ: 1984ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ನಿಂದ ಹೆಚ್ಚುವರಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್ ಒಡೆತನದ ಸಂಸ್ಥೆಯಿಂದ ಹೆಚ್ಚುವರಿ ₹7,844 ಕೋಟಿಗೆ ಕೇಂದ್ರವು ಮನವಿ ಮಾಡಿತ್ತು. ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್ ಈಗ ಡೌ ಕೆಮಿಕಲ್ಸ್ ಒಡೆತನದಲ್ಲಿದೆ.
ಈ ಅನಿಲ ದುರಂತದಲ್ಲಿ 3000ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಪರಿಸರಕ್ಕೆ ಭಾರಿ ಹಾನಿಯಾಗಿತ್ತು.
1989ರ ಪ್ರಕರಣದ ಇತ್ಯರ್ಥದ ಸಂದರ್ಭದಲ್ಲಿ ಮಾನವ ಜೀವನ ಮತ್ತು ಪರಿಸರಕ್ಕೆ ಉಂಟಾದ ನಿಜವಾದ ಹಾನಿಯ ಅಗಾಧತೆಯನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಿರಲಿಲ್ಲ ಎಂದು ಸರ್ಕಾರ ವಾದಿಸಿತ್ತು.
ಆದರೆ, ಸರ್ಕಾರದ ವಾದವನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಐವರು ನ್ಯಾಯೂರ್ತಿಗಳ ಪೀಠವು, ವಂಚನೆ ನಡೆದಿದ್ದಲ್ಲಿ ಮಾತ್ರ ಪರಿಹಾರ ನಿರ್ಣಯವನ್ನು ಕೈಬಿಡಬಹುದು. ಆದರೆ, ಇಲ್ಲಿ ಯಾವುದೇ ವಂಚನೆಯ ಕಾರಣವನ್ನು ಸರ್ಕಾರ ನೀಡಿಲ್ಲ ಎಂದು ಹೇಳಿದೆ.
‘ಎರಡು ದಶಕಗಳ ನಂತರ ಈ ಸಮಸ್ಯೆಯನ್ನು ಪ್ರಸ್ತಾಪಿಸಿರುವ ಕೇಂದ್ರ ಸರ್ಕಾರವು ಯಾವುದೇ ತಾರ್ಕಿಕ ಆಧಾರಗಳನ್ನು ನೀಡದಿರುವ ಬಗ್ಗೆ ಅತೃಪ್ತಿ ಇದೆ’ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೆಚ್ಚುವರಿ ಪರಿಹಾರಕ್ಕೆ ಕೇಂದ್ರವು ಇಟ್ಟಿರುವ ಬೇಡಿಕೆಯಲ್ಲಿ ಕಾನೂನಿಗೆ ಪೂರಕವಾದ ಯಾವುದೇ ಆಧಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸಂತ್ರಸ್ತರಿಗೆ ಪರಿಹಾರದ ಕೊರತೆಯ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಇರುವ ₹50 ಕೋಟಿಯನ್ನು ಕೇಂದ್ರ ಸರ್ಕಾರವು ಬಾಕಿ ಉಳಿದಿರುವ ಕ್ಲೈಮ್‌ಗಳನ್ನು ಪೂರೈಸಲು ಬಳಸಿಕೊಳ್ಳಬೇಕು ಎಂದು ಹೇಳಿದೆ.
ಪ್ರಕರಣದ ಇತ್ಯರ್ಥದ ಸಮಯದಲ್ಲಿ ಪರಿಹಾರದ ಮೊತ್ತ ಅಸಮರ್ಪಕವಾಗಿದೆ ಎಂದು ಭಾರತ ಸರ್ಕಾರವು ಹೇಳಿಲ್ಲ ಎಂದು ಸಂಸ್ಥೆಯ ವಾದಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.