ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆಯು 2006ರ ಐತಿಹಾಸಿಕ ಅರಣ್ಯ ಹಕ್ಕು ಕಾಯ್ದೆಯ ಪ್ರಗತಿಯನ್ನು ಕುಂಠಿತಗೊಳಿಸಿದೆ. ಬುಡಕಟ್ಟು ಜನರ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜಮ್ಶೆಡ್‌ಪುರ ಜನರು ಕಳಪೆ ಸಾರಿಗೆ ಸಂಪರ್ಕದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಜಾರ್ಖಂಡ್‌ನ ಆದಿವಾಸಿ ಜನಾಂಗದ ಮುಖ್ಯಮಂತ್ರಿಯನ್ನು ಏಕೆ ಜೈಲಿಗೆ ಅಟ್ಟಲಾಯಿತು? ಆದಿತ್ಯಪುರ ಕೈಗಾರಿಕಾ ಪ್ರದೇಶವು ಇನ್ನೂ ಪರಿಸರ ಅನುಮತಿಗಾಗಿ ಏಕೆ ಕಾಯುತ್ತಿದೆ? ಆದಿವಾಸಿಗಳ ಧಾರ್ಮಿಕ ಅಸ್ತಿತ್ವವನ್ನು ಪ್ರಧಾನಿ ಏಕೆ ನಿರಾಕರಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
‘ನಿರ್ಗಮಿಸುತ್ತಿರುವ ಪ್ರಧಾನಿ ಅವರ ಇಬ್ಬರು ಆತ್ಮೀಯ ಸ್ನೇಹಿತರ (ಅಂಬಾನಿ, ಅದಾನಿ) ಕಪ್ಪುಹಣದ ಟೆಂಪೊಗಳು ನಿರಾತಂಕವಾಗಿ ಓಡಾಡುತ್ತಿದ್ದರೂ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಿಂದ ಸುರಕ್ಷಿತವಾಗಿದ್ದಾರೆ. ಆದರೆ ಜಾರ್ಖಂಡ್‌ನ ಆದಿವಾಸಿ ಮುಖ್ಯಮಂತ್ರಿಯನ್ನು ನಾಚಿಕೆಯಿಲ್ಲದೆ ಜೈಲಿಗೆ ಹಾಕಲಾಗಿದೆ. ಈ ಮೂಲಕ ಬಿಜೆಪಿಯು ಆದಿವಾಸಿಗಳ ಗುರುತನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಅವರ ಸರ್ಕಾರ ಜಾರ್ಖಂಡ್‌ನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಏಕೆ ನಿರ್ಲಕ್ಷಿಸಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಏನಾಯಿತು ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.