ಭುವನೇಶ್ವರ: ನನ್ನ ರಾಜಕೀಯ ಜೀವನದಲ್ಲಿ ಎದುರಿಸಿದ ಅತಿ ದೊಡ್ಡ ಆರೋಪ ಎಂದರೆ 250 ಜೊತೆ ಬಟ್ಟೆಗಳನ್ನು ಹೊಂದಿದ್ದೇನೆ ಎನ್ನುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ನಾಯಕ ಮತ್ತು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಅಮರಸಿನ್ಹ ಚೌದರಿ ಅವರು ನನ್ನ ಬಟ್ಟೆಯ ಬಗ್ಗೆ ಮಾತನಾಡಿದ್ದರು’.
‘ಅಲ್ಲಿಯೇ ಜನರನ್ನು ಕೇಳಿದೆ, ₹250 ಕೋಟಿ ಹಣವನ್ನು ಲೂಟಿ ಮಾಡುವ ಮುಖ್ಯಮಂತ್ರಿ ಬೇಕೋ ಅಥವಾ 250 ಜೊತೆ ಬಟ್ಟೆಗಳಿರುವ ವ್ಯಕ್ತಿ ಬೇಕೋ ಎಂದು. ಆಗ ಜನರು 250 ಜೊತೆ ಬಟ್ಟೆಗಳಿರುವ ಮುಖ್ಯಮಂತ್ರಿ ಬೇಕು ಎಂದು ಉತ್ತರಿಸಿದರು. ನನ್ನ ಮೇಲೆ ಆರೋಪ ಮಾಡುವ ಧೈರ್ಯವನ್ನು ಪ್ರತಿಪಕ್ಷಗಳು ಎಂದಿಗೂ ಗಳಿಸಲಿಲ್ಲ’ ಎಂದರು.
ಆ ಸನ್ನಿವೇಷವನ್ನು ನೆನೆಸಿಕೊಂಡ ಮೋದಿ, 'ಆ ದಿನ ಸಾರ್ವಜನಿಕ ಸಭೆಯೊಂದಿತ್ತು. ಈ ಆರೋಪವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ನಾನು ಹೇಳಿದೆ. ಆದರೆ ಅವರು ಆರೋಪ ಮಾಡಿದ 250 ರಲ್ಲಿ ಒಂದೋ ಸೊನ್ನೆ (0) ತಪ್ಪಾಗಿರಬೇಕು, ಅಥವಾ 2 ತಪ್ಪಾಗಿರಬೇಕು ಎಂದೆ. ಆದರೂ ನಾನು ಆರೋಪವನ್ನು ಒಪ್ಪಿಕೊಳ್ಳುತ್ತೇನೆ’ ಎಂದರು.
ದಶಕಗಳಿಂದ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿಯವರ ಬಟ್ಟೆಯ ಬಗ್ಗೆ ಟೀಕಿಸುತ್ತಲೇ ಇದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ₹1.6 ಲಕ್ಷ ಸಂಬಳ ತೆಗೆದುಕೊಂಡರೂ ದುಬಾರಿ ಬಟ್ಟೆಯನ್ನು ಧರಿಸುತ್ತಾರೆ ಎಂದು ವ್ಯಂಗ್ಯವಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.