ನವದೆಹಲಿ: ಬಿಹಾರ ರಾಜ್ಯವು ಅಕ್ಷರಶಃ ವಿಫಲ ರಾಜ್ಯವಾಗಿದೆ. ಈಗಾಗಲೇ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಬಿಹಾರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಪ್ರಯತ್ನ ಅಗತ್ಯವಿದೆ ಎಂದು ಜನ್ ಸುರಾಜ್ ಪಕ್ಷದ ನಾಯಕ, ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಬಿಹಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಶಾಂತ್, 2025ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜನ್ ಸುರಾಜ್ ಪಕ್ಷವು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಹಾರ ತೀವ್ರತರವಾದ ಸಮಸ್ಯೆಗಳಿಂದ ಕೂಡಿದೆ ಎಂಬುದನ್ನು ಅರಿತುಕೊಳ್ಳಬೇಕು. ಬಿಹಾರ ಒಂದು ದೇಶವಾಗಿದ್ದರೆ, ವಿಶ್ವದ ಜನಸಂಖ್ಯೆಯ ದೃಷ್ಟಿಯಿಂದ 11ನೇ ಅತಿದೊಡ್ಡ ರಾಷ್ಟ್ರವಾಗಲಿದೆ. ನಾವು ಜನಸಂಖ್ಯೆಯ ವಿಚಾರದಲ್ಲಿ ಜಪಾನ್ ಅನ್ನು ಹಿಂದಿಕ್ಕಿದ್ದೇವೆ ಎಂದರು.
ಬಿಹಾರದ ಪರಿಸ್ಥಿತಿಯನ್ನು ಸುಧಾರಿಸಲು ಸಮಾಜ ಹತಾಶೆಗೊಂಡಿದೆ. ಇದು ದೊಡ್ಡ ಸವಾಲಾಗಿದೆ. ನೀವು ಹತಾಶರಾದಾಗ ಬದುಕುಳಿಯುವುದು ಮುಖ್ಯವಾಗಿರುತ್ತದೆಯೇ ಹೊರತು ಬೇರೆ ಯಾವುದೂ ಅಲ್ಲ ಎಂದರು.
2025ರಲ್ಲಿ ತಮ್ಮ ಪಕ್ಷದ ಸರ್ಕಾರ ರಚನೆಯಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದರೂ 2029–30ರ ವೇಳೆಗೆ ಮಧ್ಯಮ ಆದಾಯದ ರಾಜ್ಯವಾದರೆ ಅದು ದೊಡ್ಡ ವಿಷಯ. ಬಿಹಾರದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕುಂಠಿತವಾಗಿದೆ. ಅಕ್ಷರಶಃ ವಿಫಲ ರಾಜ್ಯವಾಗಿದೆ ಎಂದು ಹೇಳಿದರು.
ನಾನು ಇದನ್ನು ನಿಮ್ಮಲ್ಲಿ ಭಯ ಹುಟ್ಟಿಸಲು ಹೇಳುತ್ತಿಲ್ಲ. ರಾಜ್ಯದ ವಾಸ್ತವತೆಯನ್ನು ತೆರೆದಿಡುತ್ತಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶಿಕ್ಷಣದಲ್ಲಿ ಸುಧಾರಣೆ ಮಾಡಲಿದ್ದೇವೆ, ಮದ್ಯಪಾನದ ಮೇಲೆ ಹೇರಿರುವ ನಿಷೇಧವನ್ನು ತೆಗೆದುಹಾಕಲಿದ್ದೇವೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.