ADVERTISEMENT

ಮೂಲ ದಾಖಲೆ ಸಲ್ಲಿಸಲು ಬಿಹಾರ ಸರ್ಕಾರಕ್ಕೆ ‘ಸುಪ್ರೀಂ’ ನಿರ್ದೇಶನ

ಜಿಲ್ಲಾಧಿಕಾರಿ ಕೃಷ್ಣಯ್ಯ ಕೊಲೆ ಪ್ರಕರಣ ಮಾಜಿ ಸಂಸದ ಆನಂದ್ ಅವಧಿಪೂರ್ವ ಬಿಡುಗಡೆ

ಪಿಟಿಐ
Published 19 ಮೇ 2023, 13:06 IST
Last Updated 19 ಮೇ 2023, 13:06 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಜಿಲ್ಲಾಧಿಕಾರಿ ಜಿ.ಕೃಷ್ಣಯ್ಯ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಸಂಸದ ಆನಂದ್‌ ಮೋಹನ್‌ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಎಲ್ಲ ಮೂಲದಾಖಲೆಗಳನ್ನು ಸಲ್ಲಿಸುವಂತೆ ಬಿಹಾರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಜೆ.ಬಿ.ಪಾರ್ದೀವಾಲಾ ಅವರಿದ್ದ ನ್ಯಾಯಪೀಠವು, ‘ಪ್ರಕರಣದ ವಿಚಾರಣೆಯನ್ನು ಮುಂದೂಡುವುದು ಸಾಧ್ಯವಿಲ್ಲ. ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕೋರ್ಟ್‌ ಸಲ್ಲಿಸಬೇಕು’ ಎಂದು ಬಿಹಾರ ಸರ್ಕಾರದ ಪರ ಹಾಜರಿದ್ದ ವಕೀಲ ಮನೀಷ್‌ ಕುಮಾರ್‌ ಅವರಿಗೆ ಹೇಳಿತು.

ಬಿಹಾರದ ಗೋಪಾಲಗಂಜ್‌ ಜಿಲ್ಲಾಧಿಕಾರಿಯಾಗಿದ್ದ ಜಿ.ಕೃಷ್ಣಯ್ಯ ಅವರನ್ನು 1994ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆನಂದ್‌ ಮೋಹನ್‌ ಅವರನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದ ಬಿಹಾರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೃಷ್ಣಯ್ಯ ಅವರ ಪತ್ನಿ ಉಮಾ ಮೇಲ್ಮನವಿ ಸಲ್ಲಿಸಿದ್ದಾರೆ.

ADVERTISEMENT

ಇದಕ್ಕೂ ಮುನ್ನ ವಾದ ಮಂಡಿಸಿದ ಉಮಾ ಕೃಷ್ಣಯ್ಯ ಪರ ವಕೀಲ ಸಿದ್ಧಾರ್ಥ ಲೂಥ್ರ, ‘ಬಿಹಾರ ಸರ್ಕಾರವು ಪೂರ್ವಾನ್ವಯವಾಗುವಂತೆ ಕಾನೂನನ್ನು ಬದಲಾಯಿಸಿ, ಆನಂದ್‌ ಮೋಹನ್‌ ಅವರನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದೆ. ಮೋಹನ್‌ ಎಸಗಿದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಬೇಕು ಹಾಗೂ ವಿಚಾರಣೆಯನ್ನು ಆಗಸ್ಟ್‌ನಲ್ಲಿ ನಡೆಸಬೇಕು’ ಎಂದು ಕೋರಿದರು.

ಆಗ ‘ಪ್ರತಿವಾದಿಯ (ಆನಂದ್‌ ಮೋಹನ್) ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿ ಕಳೆದ ಏಪ್ರಿಲ್ 10ರಂದು ಹೊರಡಿಸಿದ ಆದೇಶ ಸೇರಿದಂತೆ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಆನಂದ್‌ ಮೋಹನ್‌ ಎಸಗಿದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಬೇಕು’ ಎಂದು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.