ADVERTISEMENT

ಬಿಹಾರ ಚುನಾವಣೆಗೂ ಮುನ್ನ ಹಲವು ನಾಯಕರ ನಿಷ್ಠೆ ಬದಲಾವಣೆ: ಯಾರಿಂದ ಯಾರಿಗೆ ಲಾಭ?

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 10:42 IST
Last Updated 21 ಆಗಸ್ಟ್ 2020, 10:42 IST
ಜಿತನ್‌ ರಾಮ್‌ ಮಾಂಝಿ, ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌, ಶ್ಯಾಮ್‌ ರಾಜಕ್‌
ಜಿತನ್‌ ರಾಮ್‌ ಮಾಂಝಿ, ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌, ಶ್ಯಾಮ್‌ ರಾಜಕ್‌    

ಪಟಣ: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಅಲ್ಲಿ ನಿಷ್ಠೆಯ ಸ್ಥಾನಪಲ್ಲಟಗಳಾಗುತ್ತಿವೆ, ರಾಜಕೀಯದ ಮರು ಹೊಂದಾಣಿಕೆಗಳು ಜೋರಾಗಿ ನಡೆಯುತ್ತಿದೆ.

ವಾರದ ಹಿಂದೆ ಆರ್‌ಜೆಡಿ ಮೂವರು ಶಾಸಕರನ್ನು ಹೊರ ಹಾಕಿತ್ತು. ಈಗ ಮತ್ತೆ ಇಬ್ಬರು ಆರ್‌ಜೆಡಿ ತೊರೆದಿದ್ದಾರೆ. ಎಲ್ಲರೂ ಜೆಡಿಯು ಸೇರಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಹಾರ ಸರ್ಕಾರದಲ್ಲಿ ಸಚಿವರಾಗಿದ್ದ ಜೆಡಿಯುನ ಶ್ಯಾಮ್‌ ರಾಜಕ್‌ ಅವರು ಜೆಡಿಯು ಸೇರಿದ್ದರು. ಇದಾದ ಕೆಲವೇ ದಿನಗಳಲ್ಲಿ ದಲಿತ ನಾಯಕ ಜಿತನ್‌ ರಾಮ್‌ ಮಾಂಝಿ ಅವರ ಪಕ್ಷ ಹಿಂದೂಸ್ಥಾನಿ ಅವಾಮ್‌ ಮೋರ್ಚಾ (ಎಚ್‌ಎಎಮ್‌)ಮಹಾಮೈತ್ರಿಕೂಟ (ಘಟಬಂಧನ) ತೊರೆದಿದೆ. ಮಾಂಝಿ ಬಹುತೇಕ ಎನ್‌ಡಿಎ ತೆಕ್ಕೆಗೆ ಸೇರಲಿದ್ದಾರೆ ಎನ್ನಲಾಗಿದ್ದು, ಅಲ್ಲಿ ಸೃಷ್ಟಿಯಾಗಿರುವ ದಲಿತ ನಾಯಕನ ನಿ‌ರ್ವಾತವನ್ನು ಭರ್ತಿ ಮಾಡುವ ಸಾಧ್ಯತೆಗಳಿವೆ.

2104ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಅತ್ಯಂತ ಹೀನಾಯ ಸೋಲು ಕಂಡಾಗ ನಿತೀಶ್‌ ಕುಮಾರ್ ಸೋಲಿನ ನೈತಿಕ ಹೊಣೆಹೊತ್ತು‌ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಆ ಸ್ಥಾನಕ್ಕೆ ಬಿಹಾರದ ಪ್ರಬಲ ದಲಿತ ನಾಯಕರೆನಿಸಿಕೊಂಡಿದ್ದ, ಆಪ್ತರೂ ಆಗಿದ್ದ ಜಿತನ್‌ ರಾಮ್‌ ಮಾಂಝಿ ಅವರನ್ನು ಪ್ರತಿಷ್ಠಾಪಿಸಿದ್ದರು.

ADVERTISEMENT

ಆದರೆ, 2015ರ ಹೊತ್ತಿಗೆ ಸಿಎಂ ಕುರ್ಚಿಯ ಮೇಲೆ ಮತ್ತೆ ಕಣ್ಣಿಟ್ಟ ನಿತೀಶ್‌ ಕುಮಾರ್‌ ಒತ್ತಾಯಪೂರ್ವಕವಾಗಿ ಜಿತನ್‌ ರಾಮ್‌ ಮಾಂಝಿ ಅವರನ್ನು ಕೆಳಗೆ ತಳ್ಳಿದರು. ಇದರಿಂದ ಆಕ್ರೋಶಗೊಂಡಿದ್ದ ಮಾಂಝಿ ಸಿಎಂ ಸ್ಥಾನ ತೊರೆದರಲ್ಲದೇ ಜೆಡಿಯುನಿಂದಲೂ ಹೊರ ಬಂದು ಹಿಂದೂಸ್ತಾನ್‌ ಅವಾಮ್‌ ಮೋರ್ಚ ಎಂಬ ಪಕ್ಷ ಸ್ಥಾಪಿಸಿದರು. 2015ರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಡಿಯಲ್ಲಿ ಸ್ಪರ್ಧೆ ಮಾಡಿದ್ದ ಮಾಂಝಿ ಪಕ್ಷ ಕೇವಲ ಒಂದು ಸ್ಥಾನ ಗೆದ್ದುಕೊಂಡಿತ್ತು.

ಮಹಾಘಟಬಂಧನದಲ್ಲಿದ್ದಾಗ ಉಪೇಂದ್ರ ಖುಶ್ವಾಹ, ತೇಜಸ್ವಿ ಯಾದವ್‌ ಮತ್ತು ಜಿತನ್‌ ರಾಮ್‌ ಮಾಂಝಿ

ಇದಾದ ಕೆಲವೇ ವರ್ಷಗಳಲ್ಲಿ ಬಿಹಾರದ ರಾಜಕೀಯ ಚಿತ್ರಣ ಬದಲಾಗಿತ್ತು. ಮಹಾಘಟಬಂಧನ ರಚಿಸಿಕೊಂಡು ಆರ್‌ಜೆಡಿ, ಕಾಂಗ್ರೆಸ್‌ ಜೊತೆಗಿದ್ದ ನಿತೀಶ್‌ ಏಕಾಏಕಿ ಸರ್ಕಾರ ಬೀಳಿಸಿ, ಎನ್‌ಡಿಎ ಮೈತ್ರಿ ಕೂಟ ಸೇರಿ ಬಿಜೆಪಿ ಜೊತೆಗೆ ಸರ್ಕಾರ ರಚನೆ ಮಾಡಿದರು. ರಾಜಕೀಯದ ಎದುರಾಳಿ ನಿತೀಶ್‌ ಎನ್‌ಡಿಎಗೆ ಬಂದಿದ್ದನ್ನು ಸಹಿಸದ ಮಾಂಝಿ ಮಹಾಘಟಬಂಧನಕ್ಕೆ ಜಿಗಿದರು. ಲೋಕಸಭೆ ಚುನಾವಣೆಯಲ್ಲಿ ಮಾಂಝಿ ಅವರ ಪಕ್ಷ ಸ್ಪರ್ಧೆ ಮಾಡಿತಾದರೂ ಸ್ಥಾನಗಳಿಸುವಲ್ಲಿ ವಿಫಲವಾಯಿತು. ಸದ್ಯ ವಿಧಾನಸಭೆ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ಮಾಂಝಿ ಮತ್ತೆ ನಿಷ್ಠೆ ಬದಲಿಸಿದ್ದಾರೆ. ಅವರೀಗ, ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಬಾಗಿಲಲ್ಲಿ ನಿಂತಿರುವುದಾಗಿ ಬಿಹಾರ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ.

ಮಾಂಝಿ ಅಷ್ಟು ಮುಖ್ಯವೇ?

‌ಮಾಂಝಿ ಅವರ ಪಕ್ಷ ಎಚ್‌ಎಎಮ್‌ ಜೆಡಿಯುನಲ್ಲಿ ವಿಲೀನಗೊಳ್ಳುವುದಾಗಿ ಕೆಲವರು ಹೇಳುತ್ತಿದ್ದಾರೆ. ಇದನ್ನು ಪಕ್ಷ ಅಲ್ಲಗೆಳೆದಿದೆ. ಅವರು ಎನ್‌ಡಿಎ ಸೇರುವುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ, ಇದನ್ನು ಪಕ್ಷ ಸ್ಪಷ್ಟಪಡಿಸಿಲ್ಲ. ಕೆಲ ಒಪ್ಪಂದಗಳೊಂದಿಗೆ ಅವರು ಎನ್‌ಡಿಎ ಸೇರಲಿದ್ದಾರೆ ಎಂಬ ಮಾತಂತೂ ಬಿಹಾರ ರಾಜಕೀಯದಲ್ಲಿ ಗಾಢವಾಗಿ ಹರಡಿಕೊಂಡಿದೆ. ಒಂದು ವೇಳೆ ಮಾಂಝಿ ಅವರೊಂದಿಗೆ ಮೈತ್ರಿ ಮಾಡಿಕೊಂಡರೆ ಅದರಿಂದ ನಿತೀಶ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಲಾಭವೇ ಹೆಚ್ಚು. ಮಾಂಝಿ ಆಗಮನವು ಬಿಹಾರದ ತೀರ ಹಿಂದುಳಿದ, ಪರಿಶಿಷ್ಟ ಜಾತಿಗಳಾದ ‘ಅತಿ ಪಿಚ್ಚಡ’, ಮಹಾದಲಿತ ಮತಗಳನ್ನು ಸೆಳೆಯಲು ಎನ್‌ಡಿಎಗೆ ಅನುಕೂಲವಾಗಲಿದೆ. ಸ್ವತಃ ಮಾಂಝಿ ಅವರು ಬಿಹಾರದ ‘ಮುಸ್ಸ್ಹಾರ’ (ಇಲಿ ತಿನ್ನುವ )– ಪರಿಶಿಷ್ಟ ಜಾತಿಗೆ ಸೇರಿದವರು. ಈ ಸಮುದಾಯವು ಬಿಹಾರದಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದು, ಚುನಾವಣೆ ಫಲಿತಾಂಶವನ್ನು ನಿರ್ಧರಿಸುವ ಶಕ್ತಿ ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ. ಅಷ್ಟರ ಮಟ್ಟಿಗೆ ಮಾಂಝಿ ಬಿಹಾರ ರಾಜಕೀಯದಲ್ಲಿ ಪ್ರಸ್ತುತರೆನಿಸಿಕೊಂಡಿದ್ದಾರೆ.

ತೇಜಸ್ವಿಗೆ ಬಲ ತಂದುಕೊಟ್ಟ ಶ್ಯಾಮ್‌ ರಾಜಕ್‌

ಮಾಂಝಿ ಘಟಬಂಧನ ತೊರೆಯುವುದಕ್ಕೂ ಮೊದಲು ನಡೆದ ದೊಡ್ಡ ಪಕ್ಷಾಂತರವೆಂದರೆ, ನಿತೀಶ್‌ ಅವರ ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿದ್ದ ಶ್ಯಾಮ್‌ ರಾಜಕ್‌ ಅವರು ತೇಜಸ್ವಿ ಯಾದವ್‌ ಅವರ ಆರ್‌ಜೆಡಿ ಸೇರಿದ್ದು. ಲಾಲು ಪ್ರಸಾದ್‌ ಯಾದವ್‌ ಅವರ ಆಪ್ತರಾಗಿದ್ದ ಶ್ಯಾಮ್‌ ರಾಜಕ್‌ ಅವರು 2009ರಲ್ಲಿ ಆರ್‌ಜೆಡಿ ತೊರೆದು ನಿತೀಶ್‌ ಅವರ ಜೆಡಿಯು ಸೇರಿದ್ದರು. ಆದರೆ, ವಾರದ ಹಿಂದೆ ಜೆಡಿಯು ಅವರನ್ನು ಉಚ್ಚಾಟಿಸಿತು. ಅವರು ಮತ್ತೆ ಆರ್‌ಜೆಡಿಗೆ ಸೇರಿದ್ದಾರೆ.

ಜೆಡಿಯು ತೊರೆದು ಆರ್‌ಜೆಡಿ ಸೇರ್ಪಡೆಯಾದ ಮಾಜಿ ಸಚಿವ ಶ್ಯಾಮ್‌ ರಾಜಕ್‌

ಆರ್‌ಜೆಡಿ ಸೇರುವ ಮುನ್ನ ಮಾತನಾಡಿರುವ ಶ್ಯಾಮ್‌, ‘ಲಾಲು ಪ್ರಸಾದ್‌ ಯಾದವ್‌ ಅವರು ಬೋಧಿಸಿದ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವ ನಾನು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳಲಾರೆ,’ ಎಂದು ಹೇಳಿಕೊಂಡರು.

ಶ್ಯಾಮ್‌ ಅವರು ಬಿಹಾರದ ತೀರಾ ಹಿಂದುಳಿದ, ಆದರೆ, ರಾಜಕೀಯವಾಗಿ ಪ್ರಾಧಾನ್ಯತೆ ಪಡೆದಿರುವ ‘ದೋಬಿ’ ಸಮುದಾಯಕ್ಕೆ ಸೇರಿದವರು. ಅವರ ಆಗಮನದೊಂದಿಗೆ ಬಿಹಾರದಲ್ಲಿ ತೇಜಸ್ವಿಗೆ ಹಿಂದುಳಿದ ಸಮುದಾಯದಲ್ಲಿ ತಕ್ಕಮಟ್ಟಿಗೆ ಬಲ ಸಿಕ್ಕಂತಾಗಿದೆ. ಇದು ಆರ್‌ಜೆಡಿಯ ‘ದಲಿತ–ಮುಸ್ಲಿಂ’ ಸೂತ್ರಕ್ಕೆ ಪೂರಕವಾಗಿದೆ ಎಂದು ಎಂದು ವಿಶ್ಲೇಷಿಸಲಾಗುತ್ತಿದೆ.

ಎರಡು ವಾರದಲ್ಲಿ ಆರ್‌ಜೆಡಿಯಿಂದ 5 ಶಾಸಕರು ಹೊರಕ್ಕೆ

ಕಳೆದ ಎರಡು ವಾರಗಳಲ್ಲಿ ಆರ್‌ಜೆಡಿಯ ಐವರು ಶಾಸಕರು ಜೆಡಿಯು ಸೇರಿದ್ದಾರೆ. ಇದರಲ್ಲಿ ಮೂವರನ್ನು ಪಕ್ಷವೇ ಉಚ್ಚಾಟನೆ ಮಾಡಿತ್ತು. ರಾಜಕೀಯದ ಹಲವು ಹಳೇ ಶತ್ರುಗಳು ಸದ್ಯ ಚುನಾವಣೆ ಸಂದರ್ಭದಲ್ಲಿ ಮಿತ್ರರಾಗುತ್ತಿರುವುದು ಈ ಎಲ್ಲ ಬೆಳವಣಿಗೆಗಳಿಂದ ಗೊತ್ತಾಗುವಂಥದ್ದು.

ಆರ್‌ಜೆಡಿ ತೊರೆದು ಜೆಡಿಯು ಸೇರಿದ ಶಾಸಕರೊಂದಿಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

ಸಿಎಂ ಸ್ಥಾನಕ್ಕೆ ನಿತೀಶ್‌, ತೇಜಸ್ವಿ ಅಲ್ಲದೇ ಬೇರೆ ಯಾರು?

ಇದೆಲ್ಲವೂ ರಾಜಕೀಯ ಮರು ಹೊಂದಾಣಿಕೆಯ ಪ್ರಹಸನಗಳಾಗಿದ್ದರೆ, ಸಿಎಂ ಸ್ಥಾನದ ವಿಚಾರವೂ ಚರ್ಚೆಯಾಗದೇ ಏನಿಲ್ಲ. ಎನ್‌ಡಿಎಯಿಂದ ನಿತೀಶ್‌ ಅವರೇ ಮತ್ತೆ ಸಿಎಂ ಸ್ಥಾನದ ಅಭ್ಯರ್ಥಿ. ಮಹಾಘಟಬಂಧನದಿಂದ ಲಾಲು ಪುತ್ರ ತೇಜಸ್ವಿ ಯಾದವ್‌ ಅವರೇ ಆಭ್ಯರ್ಥಿ. ಆದರೂ, ಆಗಾಗ ಹೊಸ ಹೊಸ ಹೆಸರುಗಳು ಚರ್ಚೆಯ ಮುನ್ನೆಲೆಗೆ ಬಂದು ಮರೆಯಾಗುತ್ತಿವೆ.

ಮೋದಿ ನೇತೃತ್ವದ ಮೊದಲ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಉಪೇಂದ್ರ ಕುಶ್ವಾಹ ಅವರು 2018 ರಲ್ಲಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ ಸೇರ್ಪಡೆಯಾದರು. ಅವರೂ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದೂ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು.

ಅಚ್ಚರಿಯ ಬೆಳವಣಿಗೆ ಎಂದರೆ, ಎನ್‌ಡಿಎ ಮೈತ್ರಿಕೂಟದಲ್ಲಿರುವ ರಾಮ್‌ವಿಲಾಸ್‌ ಪಾಸ್ವಾನ್‌ ಮತ್ತು ಚಿರಾಗ್‌ ಪಾಸ್ವಾನ್‌ ಅವರ ನೇತೃತ್ವದ ಎಲ್‌ಜೆಪಿ, ನಿತೀಶ್‌ ಅವರ ನಾಯಕತ್ವದ ವಿರುದ್ಧ ಭಿನ್ನದನಿ ಎತ್ತಿದೆ. ಆದರೆ, ನಾಯಕತ್ವದ ಕುರಿತು ಎದ್ದಿರುವ ಈ ಅಪಸ್ವರವನ್ನು ತಳ್ಳಿಹಾಕಿರುವ ಜೆಡಿಯುನ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ, ಮೈತ್ರಿಕೂಟದಲ್ಲಿ ನಾಯಕತ್ವದ ವಿಚಾರವಾಗಿ ಯಾವುದೇ ಅಪಸ್ವರವಿಲ್ಲ. ಎಲ್‌ಜೆಪಿಯ ಈ ನಡೆ ಸೀಟು ಹಂಚಿಕೆಯಲ್ಲಿ ಹೆಚ್ಚಿನದನ್ನು ಗಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಪ್ರತಿಬಾರಿ ನಿತೀಶ್‌ ವಿರುದ್ಧ ದಾಳಿ ನಡೆಸಿದಾಗೆಲ್ಲ ಚಿರಾಗ್‌ ಪಾಸ್ವಾನ್‌ ಬಿಜೆಪಿ ನಾಯಕರನ್ನು ಹೊಗಳುತ್ತಾರೆ. ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಾರೆ. ನಾಯಕತ್ವದ ವಿರುದ್ಧದ ತಮ್ಮ ನಿಲುವಿಗೆ ಬಿಜೆಪಿಯ ಬೆಂಬಲವಿದೆ ಎಂದು ಬಿಂಬಿಸುವ ಪ್ರಯತ್ನಗಳನ್ನೂ ಮಾಡುತ್ತಾರೆ.

ಬಿಹಾರವು ಸದ್ಯಕ್ಕೆ ಊಹಿಸಲಾಗದ ರಾಜಕೀಯ ಅಖಾಡ. ರಾಜ್ಯದ ರಾಜಕೀಯವು ಆರ್‌ಜೆಡಿ, ನಿತೀಶ್ ಕುಮಾರ್ ಮತ್ತು ಬಿಜೆಪಿ ಎಂಬ ಮೂರು ಅಂಶಗಳ ಸುತ್ತ ಗಿರಕಿ ಹೊಡೆಯುತ್ತದೆ. ಪಾಸ್ವಾನ್‌ ಅವರ ಎಲ್‌ಜೆಪಿ ಮತ್ತು ಮಾಂಝಿ ಅವರ ಎಚ್‌ಎಎಂನಂತಹ ಪಕ್ಷಗಳು ರಾಜಕೀಯ ಹೋರಾಟದ ತೀವ್ರತೆಯನ್ನು ಹೆಚ್ಚಿಸಿವೆ. ಈ ತ್ರಿಕೋನ ಹೋರಾಟದಲ್ಲಿ ಬಿಜೆಪಿ ಎಲ್ಲರ ಅವಕಾಶಗಳನ್ನು ಕಸಿದುಕೊಳ್ಳಲೂಬಹುದು. ಆದರೆ ಸಮಾಜವಾದಿ ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತಿರುವ ಆರ್‌ಜೆಡಿ, ಜೆಡಿಯುಗಳಲ್ಲಿ ಯಾವುದಾದರೂ ಒಂದಕ್ಕೆ ಹೆಚ್ಚಿನ ಬಲ ಸಿಕ್ಕರೆ, ಚುನಾವಣೆ ನಂತರ ಈ ಎರಡೂ ಪಕ್ಷಗಳು ಕೈಜೋಡಿಸಿದರೆ, ಬಿಜೆಪಿಯ ನಿರೀಕ್ಷೆ ಹುಸಿಯಾಗಲೂಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.