ಪಟನಾ: ಬಿಹಾರ ವಿಧಾನಸಭೆ ಚುನಾವಣೆ ಮತದಾನದ ವೇಳಾಪಟ್ಟಿ ಪ್ರಕಟಗೊಳ್ಳಲು ಕೇವಲ ಒಂದು ತಿಂಗಳು ಬಾಕಿ ಉಳಿದಿರುವಾಗಲೇ, ಮಹಾಘಟಬಂಧನದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಗಳು ನಡೆಯುತ್ತಿವೆ.
ಮಹಾಘಟಬಂಧನ ಮಿತ್ರ ಪಕ್ಷಗಳಾದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ನಡುವೆ 2:1ರ ಅನುಪಾತದಲ್ಲಿ ಸೀಟು ಹಂಚಿಕೆಯ ಮಾತುಕತೆಗಳು ನಡೆಯುತ್ತಿವೆ. ಆದರೆ, ಇತ್ತ ಎನ್‌ಡಿಎ ಮೈತ್ರಿಕೂಟದಲ್ಲಿ ಸಂಯುಕ್ತ ಜನತಾದಳ (ಜೆಡಿಯು) ಮತ್ತು ಲೋಕಜನ ಶಕ್ತಿ ಪಕ್ಷಗಳ (ಎಲ್‌ಜೆಪಿ) ನಡುವೆ ಭಿನ್ನಮತ ಮನೆ ಮಾಡಿದೆ.
ಬಿಹಾರದ 243 ಸ್ಥಾನಗಳ ಪೈಕಿ ಮಹಾಘಟಬಂಧನದ ಅಡಿಯಲ್ಲಿ ಆರ್‌ಜೆಡಿ 160 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ 83 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಮೈತ್ರಿಕೂಟದ ಮೂಲಗಳು ತಿಳಿಸಿವೆ.
ತನಗೆ ಸಿಗುವ 160 ಸ್ಥಾನಗಳಲ್ಲಿ ಆರ್‌ಜೆಡಿ ಸಣ್ಣಪುಟ್ಟ ಪಕ್ಷಗಳೊಂದಿಗೆ ಪಾಲು ಹಂಚಿಕೊಳ್ಳಲಿದೆ. ಸಿಪಿಐ–ಎಂಎಲ್, ಬಿಎಸ್‌ಪಿ, ವಿಐಪಿ (ವಿಕಾಸ ಶೀಲ ಇನ್ಸಾನ್ ಪಕ್ಷ)ಗಳು ಆರ್‌ಜೆಡಿ ಕೋಟಾದಲ್ಲೇ ಸ್ಥಾನಗಳನ್ನು ಪಡೆಯಲಿವೆ. ಇತ್ತ ಕಾಂಗ್ರೆಸ್ ತನಗೆ ಸಿಕ್ಕಿರುವ 83 ಸ್ಥಾನಗಳಲ್ಲೇ, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ), ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಹಿಂದುಸ್ಥಾನ್ ಅವಾಮ್ ಮೋರ್ಚಾ , ಸಿಪಿಐಗೆ ಪಾಲು ನೀಡಲಿದೆ ಎಂದು ಮೂಲಗಳು ತಿಳಿಸಿವೆ.
‘ಬಿಹಾರದಲ್ಲಿ 75-80 ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲು ಒಪ್ಪಬಾರದು ಎಂದು ನಾವು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದೇವೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸದಾನಂದ ಸಿಂಗ್ ಅವರು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ, ನಿತೀಶ್ ಕುಮಾರ್ ಅವರ ಆಪ್ತ ಮತ್ತು ಬಿಹಾರ ಸರ್ಕಾರದ ಕೈಗಾರಿಕಾ ಸಚಿವ ಶ್ಯಾಮ್ ರಜಾಕ್ ಸೋಮವಾರ ಸರ್ಕಾರ ಮತ್ತು ಜೆಡಿಯು ತೊರೆಯುವ ಸಾಧ್ಯತೆಗಳಿವೆ. ಅವರು ಆರ್‌ಜೆಡಿ ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.