ಪಟ್ನಾ: ರಾಜ್ಯ ಸರ್ಕಾರ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇನ್ನಿತರ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಬಿಹಾರ ವಿಧಾನಸಭೆಯು ಬುಧವಾರ ಮಸೂದೆಯೊಂದನ್ನು ಅಂಗೀಕರಿಸಿದೆ.
ಬಿಹಾರ ಪಬ್ಲಿಕ್ ಎಕ್ಸಾಮಿನೇಷನ್ಸ್ (ಪಿಇ) (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಮಸೂದೆ–2024ನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಮಂಡಿಸಿದರು. ವಿರೋಧ ಪಕ್ಷಗಳ ಸಭಾತ್ಯಾಗದ ಮಧ್ಯೆ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಉದ್ದೇಶವನ್ನು ಹೊಸ ಕಾನೂನು ಹೊಂದಿದೆ. ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ, ₹10 ಲಕ್ಷ ದಂಡ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಿದೆ ಎಂದು ಸಚಿವ ಚೌಧರಿ ಸದನಕ್ಕೆ ವಿವರಿಸಿದರು.
ಪರೀಕ್ಷೆಯನ್ನು ಆಯೋಜಿಸುವ ಜವಾಬ್ದಾರಿ ವಹಿಸಿಕೊಂಡಿರುವ ಸಂಸ್ಥೆಗಳು ಅಕ್ರಮದಲ್ಲಿ ಭಾಗಿಯಾಗಿದ್ದರೆ ₹1 ಕೋಟಿ ದಂಡ ವಿಧಿಸಬಹುದು. ಪರೀಕ್ಷೆ ನಡೆಸುವ ಒಟ್ಟು ವೆಚ್ಚದ ಒಂದು ಭಾಗವನ್ನು ವಸೂಲು ಮಾಡುವ ಅಧಿಕಾರವನ್ನು ಈ ಕಾಯ್ದೆ ಹೊಂದಿದೆ ಎಂದು ಹೇಳಿದರು.
ಯುವ ಸಮೂಹದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಇಂತಹ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರಿಗಳು ಡಿಎಸ್‌ಪಿ ಹುದ್ದೆಗಿಂತ ಕೆಳಗಿರಬಾರದು ಎಂಬ ಅಂಶವು ಮಸೂದೆಯಲ್ಲಿದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.