ADVERTISEMENT

ಹೃದಯಾಘಾತದಿಂದ ಬಿಜೆಪಿ ಮುಖಂಡನ ಸಾವು; ಮರಣೋತ್ತರ ಪರೀಕ್ಷಾ ವರದಿಗೆ ಆಕ್ಷೇಪ

ಪಿಟಿಐ
Published 21 ಜುಲೈ 2023, 9:01 IST
Last Updated 21 ಜುಲೈ 2023, 9:01 IST
ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಪಾಠಿ ಪ್ರಹಾರ
ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಪಾಠಿ ಪ್ರಹಾರ   

ಪಾಟ್ನಾ: ಬಿಹಾರ ಸರ್ಕಾರ ಜಾರಿಗೆ ತಂದ ಶಿಕ್ಷಕರ ನೇಮಕಾತಿ ನೀತಿಯ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮೃತಪಟ್ಟ ಪಕ್ಷದ ಮುಖಂಡ ವಿಜಯ ಸಿಂಗ್ ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರು ನೀಡಿರುವ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

ದೆಹದ ಮೇಲೆ ಯಾವುದೇ ಗಾಯವಾದ ಕಲೆಗಳಿಲ್ಲ. ವಿಜಯಕುಮಾರ್ ಅವರು ಹೃದಯಾಘಾತದಿಂದ ಹಾಗೂ ಇನ್ನಿತರ ದೈಹಿಕ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಮಂಡಳಿ ಖಚಿತಪಡಿಸಿದೆ.

ಆದರೆ ಪೊಲೀಸರ ಲಾಠಿ ಪ್ರಹಾರದಿಂದ ವಿಜಯಕುಮಾರ್ ಮೃತಪಟ್ಟರೇ ಹೊರತು ಹೃದಯಾಘಾತದಿಂದಲ್ಲ. ರಾಜ್ಯ ಸರ್ಕಾರ ಸುಳ್ಳುವರದಿಯನ್ನು ಸಿದ್ಧಪಡಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

ಶಿಕ್ಷಕರ ನೇಮಕಾತಿ ನೀತಿ ವಿರೋಧಿಸಿ ಜುಲೈ 13ರಂದು ಬಿಜೆಪಿ ವಿಧಾನಸೌಧ ಚಲೋ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಗಾಂಧಿ ಮೈದಾನದಿಂದ ಪ್ರಾರಂಭವಾದ ಈ ಮೆರವಣಿಗೆಯನ್ನು ಸ್ವಲ್ಪ ದೂರದಲ್ಲೇ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಭದ್ರಕೋಟೆಯನ್ನು ಭೇದಿಸಲು ಮುಂದಾದಾಗ ಲಾಠಿ ಪ್ರಹಾರ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೆಹಾನಾಬಾದ್ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮೃತಪಟ್ಟಿದ್ದರು.

‘ಮರಣೋತ್ತರ ಪರೀಕ್ಷೆಯ ವರದಿಯನ್ನು ತಿರುಚಲಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಒತ್ತಡದಿಂದಾಗಿ ಮರಣೋತ್ತರ ಪರೀಕ್ಷೆ ವರದಿ ತಿದ್ದಿರುವ ಸಾಧ್ಯತೆ ಇದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ಅಗತ್ಯ’ ಎಂದು ಬಿಹಾರ ವಿಧಾನಸಭೆಯ ವಿರೋಧಪಕ್ಷದ ನಾಯಕ ವಿಜಯ ಕುಮಾರ್ ಸಿನ್ಹಾ ಆಗ್ರಹಿಸಿದ್ದಾರೆ.

‘ಈ ರೀತಿ ಮರಣೋತ್ತರ ಪರೀಕ್ಷೆಯ ವರದಿ ತಿದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ ವೈಶಾಲಿ ಮತ್ತು ಲಾಖಿಸರೈ ಅವರ ಕೊಲೆ ಪ್ರಕರಣದಲ್ಲೂ ಆರೋಗ್ಯ ಇಲಾಖೆ ಹೃದಯಾಘಾತದಿಂದ ಸಾವು ಎಂದು ವರದಿ ನೀಡಿದೆ’ ಎಂದು ಸಿನ್ಹಾ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವರೂ ಆಗಿರುವ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ‘ಸಿಂಗ್ ಅವರ ಸಾವು ನಮಗೂ ನೋವು ತರಿಸಿದೆ. ಆದರೆ ಪೊಲೀಸರ ಲಾಠಿ ಪ್ರಹಾರದಿಂದ ಅವರ ಸಾವು ಸಂಭವಿಸಿಲ್ಲ ಎಂದು ಮರಣೋತ್ತರ ಪರೀಕ್ಷೆ ಹೇಳಿದೆ. ಆದರೆ ಬಿಜೆಪಿಯ ಆರೋಪ ಆದಾರರಹಿತ. ಬಿಜೆಪಿ ಮುಖಂಡರು ಈ ಸಾವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.