ಪಟಣ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಪೋರ್ನ್ ಸೈಟ್‌ಗಳೇ ಕಾರಣ. ಹೀಗಾಗಿ ಅಶ್ಲೀಲ ತಾಣಗಳನ್ನು ನಿಷೇಧಿಸಬೇಕುಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಚಿತ್ರೀಕರಿಸಿದ ಲೈಂಗಿಕ ವಿಡಿಯೋಗಳ ತುಣುಕುಗಳ ಮೂಲಕ ವೆಬ್‌ಸೈಟ್‌ಗಳು ಜನರಲ್ಲಿ ಲೈಂಗಿಕ ಉನ್ಮಾದವನ್ನು ಮತ್ತಷ್ಟು ಪ್ರಚೋದಿಸುತ್ತಿವೆ ಎಂದು ನಿತೀಶ್ ಹೇಳಿದ್ದಾರೆ.
ಹೈದರಾಬಾದ್‌ನ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಬಿಹಾರದ ಬಕ್ಸಾರ್‌ನ ಸಮಷ್ಟಿಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ನಿತೀಶ್ ಮಾತನಾಡಿದ್ದಾರೆ. ಲೈಂಗಿಕ ದೃಶ್ಯಾವಳಿಗಳನ್ನು ಬಿತ್ತರಿಸುವ ವೆಬ್‌ಸೈಟ್‌ಗಳನ್ನು ದೇಶದಲ್ಲಿ ಸಂಪೂರ್ಣ ನಿಷೇಧ ಮಾಡುವಂತೆ ಮಾಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲು ಉದ್ದೇಶಿಸಿರುವುದಾಗಿಯೂ ನಿತೀಶ್ ಕುಮಾರ್ ಹೇಳಿದ್ದಾರೆ.
‘ಅತ್ಯಂತ ಕೆಟ್ಟ ಬೆಳವಣಿಗೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ದೂರದ ಹೈದರಾಬಾದ್, ಬಿಹಾರ, ಉತ್ತರ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಾಮಾಜಿಕ ತಾಣಗಳು ಮತ್ತು ತಂತ್ರಜ್ಞಾನದ ಲಾಭಗಳ ಹೊರತಾಗಿಯೂ ಅವುಗಳ ದುಷ್ಪರಿಣಾಮಗಳ ಬಗ್ಗೆ ನಾನು ಸದಾ ಆತಂಕಿತನಾಗಿದ್ದೇನೆ,’ ಎಂದು ಅವರು ತಿಳಿಸಿದರು.
‘ಮಹಿಳೆಯರ ವಿಚಾರದಲ್ಲಿ ನೀಚರಂತೆ ವರ್ತಿಸುವ ಮಂದಿ ಲೈಂಗಿಕ ದೃಶ್ಯಗಳನ್ನು ಚಿತ್ರೀಕರಿಸಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತಾರೆ. ಇದನ್ನು ವೀಕ್ಷಿಸುವವರು ಸಹಜವಾಗಿಯೇ ಉನ್ಮಾದಗೊಳ್ಳುತ್ತಾರೆ. ಇಂಥ ಸೈಟ್‌ಗಳಿಂದ ಯುವಕರು ದೂರ ಇರಬೇಕು,’ ಎಂದು ನಾನು ಆಗ್ರಹಿಸುತ್ತೇನೆ.
‘ಪೋರ್ನ್ ಸೈಟ್‌ಗಳ ವಿರುದ್ಧ ಹಲವು ನಾಗರಿಕ ಸಂಘಟನೆಗಳು ಹೋರಾಡುತ್ತಿರುವುದನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ನಾನು ಅವರನ್ನು ಪ್ರಶಂಸಿಸುತ್ತೇನೆ. ಪೋರ್ನ್ ಸೈಟ್‌ಗಳ ಸಂಪೂರ್ಣ ನಿಷೇದಕ್ಕಾಗಿ ಪ್ರಧಾನಿಗೆ ಪತ್ರ ಬರೆಯುತ್ತೇನೆ,’ ಎಂದು ನಿತೀಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.