ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಬಿಹಾರದ ಮುಖ್ಯಮಂತ್ರಿ, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರ ಆಪ್ತರಾಗಿ ಗುರುತಿಸಿಕೊಂಡವರು ರಾಮಚಂದ್ರ ಪ್ರಸಾದ್ ಸಿಂಗ್. ರಾಜಕೀಯ ವಲಯದಲ್ಲಿ ಆರ್‌ಸಿಪಿ ಎಂದೇ ಪರಿಚಿತರು.
ಬಿಹಾರದ ನಲಂದಾ ಜಿಲ್ಲೆಯವರಾದ ಇವರು ಉತ್ತರ ಪ್ರದೇಶದ 1984ರ ಬ್ಯಾಚ್‌ನ ಐಎಎಸ್ ಅಧಿಕಾರಿ. 90ರ ದಶಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಿತೀಶ್ ಕುಮಾರ್ ಕೇಂದ್ರ ಸಚಿವರಾಗಿದ್ದರು. ಆಗ ನಿತೀಶ್ ಖಾಸಗಿ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡದ್ದು ಆರ್‌ಸಿಪಿಯವರನ್ನು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲನೆಯದ್ದು, ಆರ್‌ಸಿಪಿಯವರು ನಿತೀಶ್ ತವರೂರಾದ ನಲಂದಾದವರು. ಎರಡನೆಯದ್ದು ನಿತೀಶ್ ಅವರ ಕುರ್ಮೀ ಜಾತಿಗೆ ಸೇರಿದವರು. ಹೀಗೆ 90ರ ದಶಕದಲ್ಲಿ ಆರಂಭವಾದ ಇವರಿಬ್ಬರ ಒಡನಾಟ ಇನ್ನೂ ಮುಂದುವರಿದಿದೆ.
2005ರಲ್ಲಿ ಬಿಹಾರದ ಮುಖ್ಯಮಂತ್ರಿಯಾದ ನಿತೀಶ್ ಅಲ್ಲಿಗೂಆರ್‌ಸಿಪಿಯವರನ್ನು ಕರೆತಂದರು.ಬಿಹಾರ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. 2010ರಲ್ಲಿ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದಆರ್‌ಸಿಪಿ, ಜೆಡಿಯು ಸೇರಿದರು. ನಂತರ ರಾಜ್ಯಸಭೆ ಸದಸ್ಯರೂ ಆಗಿ ಆಯ್ಕೆಯಾದರು.
2014ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ತೊರೆದ ನಿತೀಶ್ 2015ರ ವಿಧಾನಸಭೆ ಚುನಾವಣೆ ವೇಳೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಜತೆ ಕೈಜೋಡಿಸಿ ಮಹಾಮೈತ್ರಿ ಮಾಡಿಕೊಂಡಿದ್ದರ ಹಿಂದೆ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಕೆಲಸ ಮಾಡಿದೆ. ಆದರೂ ಇಂದಿಗೂ ನಿತೀಶ್ ರಾಜಕೀಯ ತಂತ್ರಗಾರಿಕೆ ಹಿಂದಿನ ಪ್ರಮುಖ ಹೆಸರು ಆರ್‌ಸಿಪಿಯದ್ದೇ.
ಇದನ್ನೂ ಓದಿ:ನಿತೀಶ್ ‘ಅಬ್ಬರ’ದ ಹಿಂದೆ ‘ಪ್ರಶಾಂತ’!
ಸದ್ಯ ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಮಾತ್ರವಲ್ಲದೆ ಜೆಡಿಯು ಮಿತ್ರ ಪಕ್ಷಗಳ ಜತೆ ಹೊಂದಾಣಿಕೆ, ಪಕ್ಷ ಸಂಘಟನೆಯಂತಹ ಮಹತ್ವದ ಜವಾಬ್ದಾರಿಯೂ ಇವರ ಮೇಲಿದೆ.
2014–15ರಲ್ಲಿ ನಿತೀಶ್ ರಾಜೀನಾಮೆ ಬಳಿಕಜೀತನ್ ರಾಮ್ ಮಾಂಝಿ ಮುಖ್ಯಮಂತ್ರಿಯಾದರು. ಇದಾದ ಕೆಲ ಸಮಯದ ಬಳಿಕ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮರಳಿ ನಿತೀಶ್‌ಗೆ ಅಧಿಕಾರ ಬಿಟ್ಟುಕೊಡಲು ಮಾಂಝಿ ಒಪ್ಪಲಿಲ್ಲ. ಆ ಸಂದರ್ಭ ಮಾಂಝಿ ನೇತೃತ್ವದಲ್ಲಿ ಜೆಡಿಯು ಶಾಸಕರು ಬಂಡಾಯವೆದ್ದಾಗ ಪರಿಸ್ಥಿತಿಯನ್ನು ಚಾಣಾಕ್ಷವಾಗಿ ನಿಭಾಯಿಸಿದ್ದರ ಹಿಂದೆ ಆರ್‌ಸಿಪಿಯವರ ತಂತ್ರಗಾರಿಕೆಯಿದೆ. ಮಹಾಮೈತ್ರಿಯಿಂದ ಹೊರಬಂದುನಿತೀಶ್ ಮತ್ತೆ ಬಿಜೆಪಿ ಜತೆ ಕೈಜೋಡಿಸಿದಾಗಲೂ ಅವರಿಗೆ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿವಾದದ ಆರೋಪದಿಂದ ನಿತೀಶ್ ವರ್ಚಸ್ಸಿಗೆ ಧಕ್ಕೆಯಾಗದಂತೆ ನಿಗಾವಹಿಸುವಲ್ಲಿ ರಾಮಚಂದ್ರ ಪ್ರಸಾದ್ ಸಿಂಗ್ ಶ್ರಮವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.