ಪಾಟ್ನಾ(ಬಿಹಾರ): ಸಾಲಕ್ಕೆ ಸಂಬಂಧಿಸಿದಂತೆ ಸಾಲ ನೀಡಿದಾತ ಹಾಗೂ ಆತನ ಸಹಚರರು ನನ್ನನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದಲ್ಲದೇ ನನ್ನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಪಾಟ್ನಾದ ಖುಸ್ರುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಾಗದ ಪ್ರಮೋದ್ ಸಿಂಗ್ ಮತ್ತು ಆತನ ಪುತ್ರ ಅಂಶು ಸಿಂಗ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕೆಲವು ತಿಂಗಳ ಹಿಂದೆ ಪ್ರಮೋದ್ ಸಿಂಗ್ ಅವರಿಂದ ನನ್ನ ಪತಿ ₹1,500 ಸಾಲ ಪಡೆದಿದ್ದರು. ಬಡ್ಡಿ ಸಮೇತ ಸಾಲ ಮರುಪಾವತಿ ಮಾಡಿದ್ದರು. ಸಾಲ ತೀರಿಸಿದ ಮೇಲೂ ಹೆಚ್ಚಿನ ಹಣ ನೀಡಬೇಕೆಂದು ಪ್ರಮೋದ್ ಸಿಂಗ್ ಪೀಡಿಸುತ್ತಿದ್ದನು. ಹೆಚ್ಚಿನ ಹಣ ನೀಡದಿದ್ದರೆ ಗ್ರಾಮದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತೇನೆ ಎಂದು ಫೋನ್ ಮಾಡಿ ಬೆದರಿಕೆ ಹಾಕಿದ್ದನು‘ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘ಆರೋಪಿಗಳು ನನ್ನನ್ನು ಅವರ ಮನೆಗೆ ಬಲವಂತವಾಗಿ ಎಳೆದೊಯ್ದಿದ್ದಾರೆ. ಪ್ರಮೋದ್ ತನ್ನ ಮಗ ಅಂಶು ಸಿಂಗ್ ಬಳಿ ನನ್ನ ಬಾಯಿಗೆ ಮೂತ್ರ ವಿಸರ್ಜಿಸುವಂತೆ ಹೇಳಿದ್ದು, ಆತ ಹಾಗೆ ಮಾಡಿದ್ದಾನೆ. ಹೇಗೋ ಅಲ್ಲಿಂದ ತಪ್ಪಸಿಕೊಂಡು ಬಂದೆ’ ಎಂದು ಹೇಳಿದ್ದಾರೆ.
‘ಸಾಲದ ವಿಚಾರವಾಗಿ ಮಹಿಳೆ ದೂರು ನೀಡಿದ್ದು, ಶನಿವಾರ ಪೊಲೀಸ್ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಇದರಿಂದ ಕೋಪಗೊಂಡ ಪ್ರಮೋದ್ ಸಿಂಗ್, ಅದೇ ದಿನ ರಾತ್ರಿ ಆತನ ಸಹಚರರನ್ನು ಮಹಿಳೆಯ ಮನೆಗೆ ಕಳುಹಿಸಿ ಆಕೆಯನ್ನು ಕರೆತರಲು ಹೇಳಿದ್ದಾನೆ. ಸಹಚರರು ಬಂದು ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ’ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಪಾಟ್ನಾ) ರಾಜೀವ್ ಮಿಶ್ರಾ ತಿಳಿಸಿದ್ದಾರೆ.
ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.