ADVERTISEMENT

ಬಿಹಾರ ಚುನಾವಣೆ: ಜೆಡಿಯು–ಬಿಜೆಪಿಯನ್ನು ಮಣಿಸುವುದೇ ಮಹಾಘಟಬಂಧನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2020, 5:29 IST
Last Updated 29 ಸೆಪ್ಟೆಂಬರ್ 2020, 5:29 IST
ರಾಹುಲ್‌ ಮತ್ತು ತೇಜಸ್ವಿ
ರಾಹುಲ್‌ ಮತ್ತು ತೇಜಸ್ವಿ   

ಪಟ್ನಾ: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮಣಿಸಲು ರಚನೆಯಾಗಿರುವ ‘ಮಹಾಘಟಬಂಧನ’ ಮೈತ್ರಿಯಲ್ಲಿ ಆರ್‌ಜೆಡಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.

ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ. ಉಳಿದಂತೆ ಮೈತ್ರಿಯ ಭಾಗವಾಗಿರುವ ಎಡಪಕ್ಷಗಳು( ಸಿಪಿಐ (ಎಂ), ಸಿಪಿಐ (ಎಲ್‌), ಸಿಪಿಐ), ಜೆಎಂಎಂ ಪಕ್ಷಕ್ಕೂ 20 ರಿಂದ 35ಸ್ಥಾನಗಳು ಲಭ್ಯವಾಗಲಿವೆ ಎನ್ನಲಾಗಿದೆ.

ಸ್ಥಾನ ಹಂಚಿಕೆ ಕುರಿತಂತೆ ಮಹಾಘಟಬಂಧನದ ವಿರುದ್ಧ ಮುನಿಸಿಕೊಂಡಿರುವ ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಎನ್‌ಡಿಎ ಸೇರಲು ಉತ್ಸುಕರಾಗಿದ್ದು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಪಕ್ಷ ಈಗಾಲೇ ಎನ್‌ಡಿಎ ಸೇರಿದೆ. ಈ ಎರಡು ಪಕ್ಷಗಳು ಈ ಹಿಂದೆ ಮಹಾಘಟಬಂಧನಕ್ಕೆ ಬೆಂಬಲ ಸೂಚಿಸಿದ್ದವು.

ADVERTISEMENT

ಕಳೆದ ಚುನಾವಣೆಯಲ್ಲಿ 81 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆರ್ ಜೆಡಿ 150 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಪಡೆದುಕೊಂಡು ಮೈತ್ರಿಯಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಸಲ 27 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಈ ಸಲ 70 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಕೋರಿತು. ಆದರೆ ಇದಕ್ಕೆ ಒಪ್ಪದ ಆರ್‌ಜೆಡಿ 58 ಸ್ಥಾನಗಳನ್ನು ನೀಡಲು ಒಪ್ಪಿದೆ. ಉಳಿದ 35 ಸ್ಥಾನಗಳನ್ನು ಎಡಪಕ್ಷಗಳು ಸೇರಿದಂತೆ ಇತರೆ ಮೈತ್ರಿ ಪಕ್ಷಗಳಿಗೆ ನೀಡಲಾಗುವುದು ಎಂದು ಆರ್‌ಜೆಡಿ ಹೇಳಿದೆ.

ಮಹಾಘಟಬಂಧನದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷಗಳು ದೊಡ್ಡಣ್ಣನ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಮೈತ್ರಿಯ ಸಣ್ಣಪುಟ್ಟ ಪಕ್ಷಗಳು ಅಪಸ್ವರ ಎತ್ತಿವೆ. ಇನ್ನು ಜೆಡಿಯು, ಬಿಜೆಪಿ ಸೋಲಿಸುವ ಗುರಿಯನ್ನು ಹೊಂದಿರುವ ಎಡಪಕ್ಷಗಳು ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷವನ್ನೆ ನೆಚ್ಚಿಕೊಂಡಿವೆ.

ಈಗಾಗಲೇ ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದ ಯಾದವರ ಮತಗಳು ಸುಲಭವಾಗಿ ಮಹಾಘಟಬಂಧನ ಮೈತ್ರಿಯತ್ತ ಬರಲಿವೆ ಎಂಬುದು ಲೆಕ್ಕಚಾರ.

ಮೇವು ಹಗರಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಅನುಪಸ್ಥಿತಿಯಲ್ಲಿ ಆರ್‌ಜೆಡಿ ತನ್ನ ಮೊದಲ ಚುನಾವಣೆಯನ್ನು ಎದುರಿಸುತ್ತಿದೆ. ಲಾಲು ಸದ್ಯ ಜಾರ್ಖಂಡ್ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.