ಪಟ್ನಾ: ಶಿಕ್ಷಕರ ನೇಮಕಾತಿ ಪರೀಕ್ಷೆಯ (ಟಿಆರ್‌ಇ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮತ್ತೆ ಐವರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ನಡೆದ ಟಿಆರ್‌ಇ-3 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಉಜ್ಜಯಿನಿ ಪ್ರದೇಶದಿಂದ ಒಂದೇ ಗ್ಯಾಂಗ್‌ನ ಭಾಗವಾಗಿರುವ ಐವರನ್ನು ಬಂಧಿಸಲಾಗಿದೆ ಎಂದು ಆರ್ಥಿಕ ಅಪರಾಧಗಳ ಘಟಕ (ಇಒಯು) ತಿಳಿಸಿದೆ.
ಆರೋಪಿಗಳನ್ನು ಪಟ್ನಾ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕೋರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪದ ಬೆನ್ನಲ್ಲೇ ಟಿಆರ್‌ಇ-3 ಪರೀಕ್ಷೆಯನ್ನು ಬಿಹಾರ ಲೋಕಸೇವಾ ಆಯೋಗವು (ಬಿಪಿಎಸ್‌ಸಿ) ರದ್ದುಗೊಳಿಸಿದೆ. ಹೊಸ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಮಾರ್ಚ್ 15ರಂದು 415 ಕೇಂದ್ರಗಳಲ್ಲಾಗಿ ಪರೀಕ್ಷೆ ನಡೆದಿತ್ತು. ಸುಮಾರು 3.75 ಲಕ್ಷ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು. ಮಾರ್ಚ್ 16ರಂದು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇಒಯು ಎಫ್‌ಐಆರ್ ದಾಖಲಿಸಿತ್ತು.
ಜಾರ್ಖಂಡ್‌ನ ವಿವಿಧ ಸ್ಥಳಗಳಲ್ಲಿ ಇಒಯು ವಿಶೇಷ ತಂಡವು ದಾಳಿ ನಡೆಸಿತ್ತಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ 266 ಮಂದಿಯನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.