ADVERTISEMENT

ಬಿಹಾರ: ₹3,600 ಕೋಟಿ ಮೊತ್ತದ ಟೆಂಡರ್‌ಗಳು ರದ್ದು

ಬಿಹಾರ: ಮಹಾಘಟಬಂಧನ್‌ ಆಡಳಿತದಲ್ಲಿ ಮಂಜೂರಾಗಿದ್ದ ಗ್ರಾಮೀಣ ನೀರು ಸರಬರಾಜು ಕಾಮಗಾರಿಗಳಿಗೆ ತಡೆ

ಪಿಟಿಐ
Published 5 ಜುಲೈ 2024, 14:23 IST
Last Updated 5 ಜುಲೈ 2024, 14:23 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ‘ಮಹಾಘಟಬಂಧನ್‌ ಆಡಳಿತ ಅವಧಿಯಲ್ಲಿ ಮಂಜೂರಾಗಿದ್ದ ₹3,600 ಕೋಟಿ ಮೊತ್ತದ ಗ್ರಾಮೀಣ ನೀರು ಸರಬರಾಜು ಕಾಮಗಾರಿಗಳ ಟೆಂಡರ್‌ಗಳನ್ನು ಬಿಹಾರ ಸರ್ಕಾರವು ರದ್ದುಗೊಳಿಸಿದೆ’ ಎಂದು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ (ಪಿಎಚ್‌ಇ) ಇಲಾಖೆಯ ಸಚಿವ ನೀರಜ್ ಕುಮಾರ್ ಸಿಂಗ್‌ ಶುಕ್ರವಾರ ಇಲ್ಲಿ ತಿಳಿಸಿದರು.

‘ಈ ಟೆಂಡರ್‌ಗಳಲ್ಲಿ ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲ ಹಾಗೂ ಇವು ಸಾಕಷ್ಟು ಪ್ರದೇಶಗಳನ್ನು ಒಳಗೊಂಡಿಲ್ಲ ಎಂಬುದು ಇಲಾಖೆ ನಡೆಸಿದ ತನಿಖೆಯಲ್ಲಿ ದೃಢಪಟ್ಟ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಈ ಹಿಂದೆ ಪಿಎಚ್‌ಇ ಇಲಾಖೆಯು ₹826 ಕೋಟಿ ಮೌಲ್ಯದ 350 ಟೆಂಡರ್‌ಗಳನ್ನು ರದ್ದುಗೊಳಿಸಿತ್ತು. ಮಹಾಘಟಬಂಧನ್‌ ಸರ್ಕಾರದ ಅವಧಿಯಲ್ಲಿ ಅಂತಿಮಗೊಂಡಿದ್ದ ₹4,400 ಕೋಟಿಗೂ ಹೆಚ್ಚು ಮೊತ್ತದ 1,160 ಟೆಂಡರ್‌ಗಳನ್ನು ರದ್ದುಗೊಳಿಸಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಇವು ಕೈಪಂಪ್‌ ಅಳವಡಿಕೆ ಹಾಗೂ ಕಿರು ನೀರು ಸರಬರಾಜು ವ್ಯವಸ್ಥೆಗೆ ಸಂಬಂಧಿಸಿವೆ. ತನಿಖಾ ವರದಿ ಬಂದ ನಂತರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ, ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಟೆಂಡರ್ ಕರೆಯಲಾಗುವುದು’ ಎಂದು ಸಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.