ನವದೆಹಲಿ: ಮಹಾರಾಷ್ಟ್ರದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಜಾಗೃತಗೊಂಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ರಾಜ್ಯದಲ್ಲಿನ ಸಂಭವನೀಯ ಪಕ್ಷಾಂತರ ಅಥವಾ ಆಮಿಷವೊಡ್ಡಿ ಶಾಸಕರನ್ನು ಸೆಳೆಯುವುದನ್ನು ತಡೆಯಲು ಮೈತ್ರಿಕೂಟ ಮುಂದಾಗಿದೆ.
ಮಹಾರಾಷ್ಟ್ರದ ನಂತರ ಬಿಜೆಪಿ ಬಿಹಾರದಲ್ಲಿ ಕಾರ್ಯತಂತ್ರಕ್ಕೆ ಮುಂದಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಈ ವಾರಾಂತ್ಯದಲ್ಲಿ ಪಕ್ಷದ ಶಾಸಕರ ಸಭೆಯನ್ನು ನಿತೀಶ್ ಕುಮಾರ್ ಕರೆದಿದ್ದಾರೆ. ಆ ನಂತರ ಸಂಸದರ ಜೊತೆಗೆ ಪ್ರತ್ಯೇಕವಾಗಿ ಮುಖಾಮುಖಿಯಾಗಲು ನಿರ್ಧರಿಸಿದ್ದಾರೆ.
‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಮೋದಿ, ‘ಜೆಡಿಯುನಲ್ಲಿ ಹಲವು ಶಾಸಕರು, ಸಂಸದರು ಅಸಮಾಧಾನಗೊಂಡಿದ್ದಾರೆ. ಬಿಹಾರ ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ’ ಎಂದು ಹೇಳಿದ್ದಾರೆ.
ಬಿಜೆಪಿಗೆ ವಂಚಿಸಿದ ನಿತೀಶ್ ಕುಮಾರ್ ಅವರ ನಡೆಯಿಂದ ಹಲವು ಶಾಸಕರು, ಸಂಸದರಿಗೆ ಅಸಮಾಧಾನವಿದೆ. ಎರಡೂ ಪಕ್ಷಗಳ ಶಾಸಕರ ನಡುವೆ 16–17 ವರ್ಷಗಳಿಂದ ಸಹಜ ಬಾಂಧವ್ಯವಿದೆ. ಅವರೀಗ ತಮ್ಮ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಾಮ್ರಾಟ್ ಚೌಧರಿ ಅವರು, ಜೆಡಿಯುನಲ್ಲಿನ ಆಂತರಿಕ ಬೆಳವಣಿಗೆಗಳು ಆಡಳಿತಾರೂಢ ಮೈತ್ರಿಕೂಟದಲ್ಲಿ ಪಕ್ಷಾಂತರ ಆಗುವ ಸೂಚನೆ ನೀಡಿವೆ. ಈಗ ನಿತೀಶ್ ಕುಮಾರ್ ನಡೆಸುತ್ತಿರುವ ಸಭೆಯಲ್ಲಿ ಭಾಗವಹಿಸುತ್ತಿರುವ ಶಾಸಕರು ಅಷ್ಟೇನೂ ಜನಪ್ರಿಯರಲ್ಲ‘ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೆಡಿಯು ರಾಷ್ಟ್ರೀಯ ವಕ್ತಾರ, ರಜಿಬ್ ರಂಜನ್ ಅವರು ‘ಬಿಜೆಪಿಯ ವಾದವನ್ನು ತಳ್ಳಿಹಾಕಿದ್ದಾರೆ. ಬಿಜೆಪಿಯ ಈಗಿನ ವಾದವು ಕೆಲವು ವರ್ಷಗಳ ಹಿಂದೆ ಅವರು ಮಾಡಿದ್ದ ಗಣೇಶನ ಮೂರ್ತಿಗಳು ಹಾಲು ಕುಡಿದವು ಎಂಬಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು, ‘ಪ್ರತಿಪಕ್ಷಗಳು ಒಗ್ಗೂಡಲು ಇದು ಸಕಾಲ. ಪ್ರಧಾನಮಂತ್ರಿ ಎಲ್ಲ ಕಡೆಯೂ ಡಕಾಯಿತಿ ಮಾಡುತ್ತಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಏನಾಯಿತು ಎಂದು ನೀವು ಗಮನಿಸಿದ್ದೀರಿ. ಪ್ರಧಾನಿ ಮೋದಿ ಸೋಲಿಸಲು ನಾವು ಹೆಚ್ಚಿನ ಬೆಂಬಲ ಕ್ರೋಡಿಕರಿಸಬೇಕಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.