ADVERTISEMENT

ಬಿಹಾರ: ಭಾರಿ ಮಳೆ, ಪ್ರವಾಹಕ್ಕೆ ತತ್ತರ, 4 ದಿನಗಳಲ್ಲಿ 17 ಜನರ ಸಾವು

ನಗರದ ರಸ್ತೆಯಲ್ಲಿ ದೋಣಿ ಬಳಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 20:00 IST
Last Updated 29 ಸೆಪ್ಟೆಂಬರ್ 2019, 20:00 IST
ಪಟ್ನಾದಲ್ಲಿ ಜನರು ತಮ್ಮ ಸರಂಜಾಮುಗಳೊಂದಿಗೆ ಜಲಾವೃತವಾದ ರಸ್ತೆಯಲ್ಲಿಯೇ ಸುರಕ್ಷಿತ ಸ್ಥಳಕ್ಕೆ ತೆರಳಿದರು
ಪಟ್ನಾದಲ್ಲಿ ಜನರು ತಮ್ಮ ಸರಂಜಾಮುಗಳೊಂದಿಗೆ ಜಲಾವೃತವಾದ ರಸ್ತೆಯಲ್ಲಿಯೇ ಸುರಕ್ಷಿತ ಸ್ಥಳಕ್ಕೆ ತೆರಳಿದರು   

ಪಟ್ನಾ: ಬಿಹಾರದಲ್ಲಿ ಕಳೆದ 72 ಗಂಟೆಗಳಲ್ಲಿ ಸುರಿದ ಭಾರಿ ಮಳೆಯಿಂದ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜಧಾನಿ ಪಟ್ನಾ ಬಹುತೇಕ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನರ ರಕ್ಷಣೆಗೆ ದೋಣಿಗಳನ್ನು ಬಳಸಲಾಯಿತು.

ನಾಲ್ಕು ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪಟ್ನಾದ ಬಹುತೇಕ ಪ್ರದೇಶಗಳುಭಾನುವಾರ ಜಲಾವೃತಗೊಂಡಿದ್ದವು. ಮಳೆ ಹಾಗೂ ಚರಂಡಿ ನೀರುರಸ್ತೆಗಳಿಗೆ ನುಗ್ಗಿತ್ತು. ವ್ಯಾಪಾರ ಕೇಂದ್ರಗಳು ಹಾಗೂ ಅಂಗಡಿಗಳು ಬಂದ್ ಆಗಿದ್ದವು.

ಕೆಲವು ಸಚಿವರ ಮನೆಗಳು ಜಲಾವೃತಗೊಂಡಿವೆ.ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಮನೆ ಇರುವ ಐಷಾರಾಮಿ ಕಾಲೊನಿ ರಾಜೇಂದ್ರ ನಗರದಲ್ಲೂ ದೋಣಿಗಳ ಮೂಲಕ ಜನರನ್ನು ರಕ್ಷಿಸಲಾಯಿತು.

ADVERTISEMENT

ಗಂಗಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತಟದಲ್ಲಿರುವ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ನದಿಯಲ್ಲಿ ನೀರಿನ ಹರಿವು ರಭಸವಾಗಿದೆ. ಹಾಗಾಗಿ, ಚರಂಡಿ ಮೂಲಕ ನದಿಗೆ ಸೇರುವ ನೀರು ಹಿಮ್ಮುಖವಾಗಿ ಚಲಿಸಿ ನಗರಕ್ಕೆ ವಾಪಸ್ ಬರುತ್ತಿದೆ. ಹೀಗಾಗಿ ಇಡೀ ನಗರದಲ್ಲಿ ನೀರು ನಿಂತಿದೆ, ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ವಿವರಿಸಿದರು.

ವಿದ್ಯುತ್ ಕೇಂದ್ರಗಳು ಹಾಗೂ ನೀರು ಸರಬರಾಜು ಮಾಡುವ ಪಂಪ್ ಹೌಸ್‌ಗಳಲ್ಲಿ ನೀರು ತುಂಬಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ನೀರು ಸರಬರಾಜಿನಲ್ಲೂ ವ್ಯತ್ಯಯ ಉಂಟಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ಅವರು ತಿಳಿಸಿದ್ದಾರೆ.

ಮುಂದಿನ ಮೂರು ದಿನಗಳವರೆಗೆ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ. ವಿದ್ಯುತ್ ಪೂರೈಕೆ ಇಲ್ಲದ ಕಾರಣಬಹುತೇಕ ಪ್ರದೇಶಗಳು ಕತ್ತಲಲ್ಲಿ ಮುಳುಗಿವೆ.

ಪಟ್ನಾದಲ್ಲಿ ಇಂದೂ ಮಳೆ

ಕಳೆದ 24 ಗಂಟೆಗಳಲ್ಲಿ ಪಟ್ನಾದಲ್ಲಿ 212 ಮಿಲಿಮೀಟರ್ ಮಳೆಯಾಗಿದೆ. ಮುಂದಿನ ಎರಡು ದಿನ ಮಳೆ ಮುಂದುವರಿ ಯಲಿದೆ. ಸೋಮವಾರ ಅತ್ಯಧಿಕ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದ ರೈಲು ಹಳಿಗಳು ಮುಳುಗಿರುವ ಕಾರಣ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
**

ಮುಂಗಾರು ಮುಕ್ತಾಯ, ಹಲವೆಡೆ ಸಕ್ರಿಯ

*ಜೂನ್ 1ರಿಂದ ಸೆಪ್ಟೆಂಬರ್ 30ವರೆಗಿನ 4 ತಿಂಗಳ ಮುಂಗಾರು ಅವಧಿ ಸೋಮವಾರ ಅಧಿಕೃತವಾಗಿ ಮುಕ್ತಾಯ

* ಆದರೆ ದೇಶದ ಹಲವೆಡೆ ಮುಂದುವರಿದ ಮಳೆ; ರಾಜಸ್ಥಾನ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಮುಂಗಾರು ಸಕ್ರಿಯ

* ವಾಯುಭಾರ ಕುಸಿತದ ಕಾರಣ ರಾಜಸ್ಥಾನ ಹಾಗೂ ಗುಜರಾತಿನ ಕೆಲ ಭಾಗಗಳಲ್ಲಿ ಅಕ್ಟೋಬರ್‌ 5ರವರೆಗೂ ಮಳೆ ಸಾಧ್ಯತೆ

* ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್‌ನ ಕೆಲ ಭಾಗಗಳಲ್ಲಿ ಅಕ್ಟೋಬರ್ 3ರವರೆಗೆ ಅತ್ಯಧಿಕ ಮಳೆ ಸುರಿಯಬಹುದು

* ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಉತ್ತರ ಒಡಿಶಾ, ಗುಜರಾತ್, ಮಿಜೋರಾಂ, ತ್ರಿಪುರಾ, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಮುನ್ಸೂಚನೆ

ವಾಡಿಕೆಗಿಂತ ಹೆಚ್ಚು ಮಳೆ
9% – ದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚುವರಿಯಾಗಿ ಸುರಿದ ಮಳೆ ಪ್ರಮಾಣ

16% – ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚುವರಿಯಾಗಿ ಸುರಿದ ಮಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.