ಪಟ್ನಾ: ಗುಂಡಿನ ದಾಳಿಯಲ್ಲಿ ಗಾಯಗೊಂಡು ಪಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆದರೆ, ಕೆಲವೇ ಗಂಟೆಗಳಲ್ಲಿ ಆತನ ಒಂದು (ಎಡ) ಕಣ್ಣು ಇಲ್ಲವಾಗಿದೆ. ವ್ಯಕ್ತಿಯ ಸಾವಿನ ಸುದ್ದಿ ತಿಳಿದು ದುಃಖದಲ್ಲಿ ಮುಳುಗಿದ್ದ ಕುಟುಂಬ ಇದೀಗ, ಆಘಾತಕ್ಕೊಳಗಾಗಿದೆ.
ಅಕ್ರಮದಲ್ಲಿ ತೊಡಗಿರುವ ಆಸ್ಪತ್ರೆಯ ವೈದ್ಯರೇ ಕಣ್ಣನ್ನು ತೆಗೆದಿದ್ದಾರೆ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಆಸ್ಪತ್ರೆಯ ಆಡಳಿತ ಕಣ್ಣು ಕಾಣೆಯಾಗಿರುವುದಕ್ಕೆ ಇಲಿಗಳು ಕಾರಣ ಎಂದು ಹೇಳಿಕೆ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಗುಂಡು ತಗುಲಿ ಗಾಯಗೊಂಡಿದ್ದ ಫಾಂತುಸ್ ಕುಮಾರ್ ಎಂಬವರು ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದರು. ಈ ಆಸ್ಪತ್ರೆಯು ಪಟ್ನಾದಲ್ಲೇ ಎರಡನೇ ಅತಿದೊಡ್ಡದು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ್ ಮೃತಪಟ್ಟಿರುವುದಾಗಿ ಮರುದಿನ (ಶುಕ್ರವಾರ) ಘೋಷಿಸಲಾಗಿತ್ತು. ಶನಿವಾರದವರೆಗೂ ಆಸ್ಪತ್ರೆಯಲ್ಲೇ ಇದ್ದ ಕುಟುಂಬದವರು, ಕಣ್ಣು ಕಾಣೆಯಾಗಿರುವುದು ಗೊತ್ತಾಗುವುದಕ್ಕೆ ಮುನ್ನ ಕೆಲ ಹೊತ್ತು ಮಾತ್ರವೇ ಆಚೀಚೆ ಹೋಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಆಸ್ಪತ್ರೆಯವರೇ ಕಣ್ಣು ತೆಗೆದಿರಬೇಕು ಎಂದು ಆರೋಪಿಸಿರುವ ಮೃತನ ಸಂಬಂಧಿಕರು, ಗುಂಡು ಹಾರಿಸಿದವರೊಂದಿಗೆ ನಂಟು ಹೊಂದಿರುವವರು ಅಥವಾ ಕಣ್ಣು ಮಾರಾಟ ದಂಧೆಯಲ್ಲಿ ತೊಡಗಿರುವವರು ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಶಂಕಿಸಿದ್ದಾರೆ.
'ಇಷ್ಟು ದೊಡ್ಡ ವ್ಯವಸ್ಥೆಯನ್ನೇ ನಂಬಲು ಸಾಧ್ಯವಾಗುತ್ತಿಲ್ಲ ಎಂದರೆ, ಇನ್ಯಾರನ್ನು ನಾವು ನಂಬುವುದು? ಐಸಿಯುನಲ್ಲೇ ಯಾರೋ ಕಣ್ಣು ತೆಗೆದಿದ್ದಾರೆ. ಆಸ್ಪತ್ರೆಯವರು ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ. ಇದು ದುರದೃಷ್ಟಕರ' ಎಂದು ಅವರು ಅಳಲು ತೋಡಿಕೊಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ದೇಹಕ್ಕೆ ಹಾನಿಯಾಗಿರುವುದನ್ನು ಖಚಿತಪಡಿಸಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, 'ಇದನ್ನು ಸಹಿಸಲಾಗದು. ನಿರ್ಲಕ್ಷ್ಯ ವಹಿಸಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಇಲಿಗಳು ಕಣ್ಣಿಗೆ ಕಚ್ಚಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ಕಾಯಬೇಕಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಹಾಗೆಯೇ, 'ಕಾರ್ನಿಯಾ (ಕಣ್ಣಿನ ಮುಂಭಾಗದಲ್ಲಿರುವಪಾರದರ್ಶಕ ಪಟಲ) ಜೋಡಿಸುವ ಶಸ್ತ್ರ ಚಿಕಿತ್ಸೆಗೆ ಬಳಸುವ ಕಣ್ಣನ್ನು ವ್ಯಕ್ತಿಯು ಮೃತಪಟ್ಟ ನಾಲ್ಕರಿಂದ ಆರು ಗಂಟೆಯ ಒಳಗೆ ತೆಗೆಯಬೇಕು. ಕುಮಾರ್ ಅವರು ಶುಕ್ರವಾರ ರಾತ್ರಿ 8.55ಕ್ಕೆ ಮೃತಪಟ್ಟಿದ್ದಾರೆ. ಕಣ್ಣು ಕಾಣೆಯಾಗಿರುವುದು ಶನಿವಾರ ಮಧ್ಯರಾತ್ರಿ 1ಕ್ಕೆ ಗೊತ್ತಾಗಿದೆ' ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.