ADVERTISEMENT

ಮುಸ್ಲಿಮರ ಸಮಾವೇಶದಲ್ಲಿ ಟೋಪಿ ಧರಿಸಲು ನಿರಾಕರಣೆ; ವಿವಾದಕ್ಕೀಡಾಯಿತು ಸಚಿವರ ನಡೆ!

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 2:49 IST
Last Updated 1 ಅಕ್ಟೋಬರ್ 2018, 2:49 IST
ಕೃಪೆ: ಎಎನ್‍ಐ
ಕೃಪೆ: ಎಎನ್‍ಐ   

ಪಟನಾ: ಭಾನುವಾರ ಬಿಹಾರದ ಕಟಿಹಾರ್‌ನಲ್ಲಿ ನಡೆದ ಮುಸ್ಲಿಂ ನಾಯಕರ ಸಮಾವೇಶದಲ್ಲಿ ಮುಸ್ಲಿಂ ಟೋಪಿ ಧರಿಸಲು ಬಿಹಾರದ ಇಂಧನ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ನಿರಾಕರಿಸಿರುವುದು ವಿವಾದಕ್ಕೀಡಾಗಿದೆ.

ಜೆಡಿಯು ಪಕ್ಷ ಕಟಿಹಾರ್‌ನಲ್ಲಿ ತಲೀಮಿ ಬೆದಾರಿ ಸಮಾವೇಶವನ್ನು ಆಯೋಜಿಸಿತ್ತು.ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ಬಿಜೇಂದ್ರ ಪ್ರಸಾದ್ ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಸಮಾರಂಭದಲ್ಲಿ ಸ್ವಾಗತ ಕೋರುವ ವೇಳೆ ಆಯೋಜಕರೊಬ್ಬರು ಯಾದವ್ ಅವರಿಗೆ ಮುಸ್ಲಿಂ ಟೋಪಿ ಧರಿಸಲು ಯತ್ನಿಸಿದಾಗ ನಿರಾಕರಿಸಿದ ಅವರು, ಟೋಪಿಯನ್ನು ಸ್ವೀಕರಿಸಿ ಪಕ್ಕದಲ್ಲಿದ್ದ ಸಹಾಯಕನಿಗೆ ನೀಡಿದ್ದಾರೆ.
ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ ಸಚಿವರ ಈ ನಡೆ ಬಗ್ಗೆ ಅಲ್ಲಿ ಸೇರಿದ್ದ ಜನರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.ಕೆಲವರು ಸಚಿವರ ವಿರುದ್ಧ ಪ್ರತಿಭಟನೆಯನ್ನೂ ವ್ಯಕ್ತ ಪಡಿಸಿದ್ದಾರೆ.

2011ರಲ್ಲಿ ಸದ್ಭಾವನಾ ವೃತದ ವೇಳೆ ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ್ದಕ್ಕೆ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದರು.2013 ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತೀಶ್ ಕುಮಾರ್, ದೇಶದಲ್ಲಿ ಅಧಿಕಾರ ನಡೆಸಬೇಕಾದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು.ಕೆಲವೊಮ್ಮೆ ನೀವು ಟೋಪಿ ಧರಿಸಬೇಕಾಗುತ್ತದೆ, ಇನ್ನು ಕೆಲವೊಮ್ಮೆ ತಿಲಕ ಎಂದಿದ್ದರು.
ಯಾದವ್ಅವರು ಟೋಪಿ ಧರಿಸಲು ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಎಚ್ಎಎಂ(ಎಸ್) ವಕ್ತಾರ ಧನೀಷ್ ರಿಜ್ವಾನ್, ಜೆಡಿ(ಯು) ಈಗ ಆರ್‌ಎಸ್‌ಎಸ್‌ಸಿದ್ಧಾಂತದತ್ತ ವಾಲಿದೆ. ನೀವು ಟೋಪಿಯನ್ನೂ ಧರಿಸಬೇಕು, ತಿಲಕವನ್ನೂ ಇಡಬೇಕು ಎಂದು ನಿತೀಶ್ ಅವರು ಹೇಳುತ್ತಿದ್ದರು. ಈಗ ತಮ್ಮ ಸಚಿವರು ಟೋಪಿ ಧರಿಸಲು ನಿರಾಕರಿಸಿದ್ದು ಯಾಕೆ ಎಂದು ನಿತೀಶ್ ಅವರೇ ಕೇಳಲಿ ಎಂದಿದ್ದಾರೆ.

ADVERTISEMENT

ಇತ್ತ ಯಾದವ್ ಅವರ ನಡೆಯನ್ನು ಸಮರ್ಥಿಸಿಕೊಂಡ ಜೆಡಿ(ಯು) ಎಂಎಲ್‍ಸಿ ತನ್ವೀರ್ ಅಖ್ತರ್, ತುಂಬಾ ಸೆಖೆ ಇದ್ದ ಕಾರಣ ಸಚಿವರು ಟೋಪಿ ಧರಿಸಲು ನಿರಾಕರಿಸಿದರು. ಆಯೋಜಕರು ನೀಡಿದ ಗಮ್ಚಾವನ್ನು ಸ್ವೀಕರಿಸಿ ಸಚಿವರು ಹೆಗಲಿಗೆ ಹಾಕಿಕೊಂಡಿದ್ದರು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.