ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನೂಡಲ್ಸ್ ತಯಾರಿಕಾ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಾವಿಗೀಡಾಗಿದ್ದಾರೆ.
ಶನಿವಾರ ರಾತ್ರಿ 10 ಗಂಟೆಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದು ಸುಮಾರು 5 ಕಿ.ಮೀ ಸುತ್ತಲಿನ ಪ್ರದೇಶಕ್ಕೂ ತಲುಪಿತ್ತು. ರಕ್ಷಣಾ ಕಾರ್ಯಾಚರಣೆಯು ಮುಂದುವರಿದಿದ್ದು, ಕಾರ್ಖಾನೆಯ ಅವಶೇಷಗಳ ಅಡಿಯಲ್ಲಿ 10ಕ್ಕೂ ಹೆಚ್ಚು ಜನರು ಸಿಲುಕಿರುವುದಾಗಿ ವರದಿಯಾಗಿದೆ.
ಸ್ಫೋಟದ ತೀವ್ರತೆಗೆ ಸಮೀಪದ ಮತ್ತೊಂದು ಘಟಕಕ್ಕೂ ಹಾನಿಯಾಗಿದ್ದು, ಅದರಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರಿಗೂ ಗಾಯಗಳಾಗಿವೆ.
ಮುಜಾಫರ್‌ಪುರದ ಪೊಲೀಸ್ ಎಸ್ಪಿ ಜಯಂತ್ ಕಾಂತ್ ಅವರು ಘಟನೆಯ ಬಗ್ಗೆ ಮಾತನಾಡಿದ್ದು, 'ಅವಶೇಷಗಳನ್ನು ತೆರವುಗೊಳಿಸಿ ಈವರೆಗೂ ಆರು ಮೃತ ದೇಹಗಳನ್ನು ಹೊರ ತೆಗೆದಿದ್ದೇವೆ. ಐವರು ಕಾರ್ಮಿಕರು ಗಾಯಗೊಂಡಿದ್ದು, ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದಿದ್ದಾರೆ.
ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.