ADVERTISEMENT

ಜನಾದೇಶವನ್ನು ಅವಮಾನಿಸಿದ ನಿತೀಶ್ ಕುಮಾರ್: ಬಿಜೆ‍ಪಿ ವಾಗ್ದಾಳಿ

ಪಿಟಿಐ
Published 9 ಆಗಸ್ಟ್ 2022, 14:48 IST
Last Updated 9 ಆಗಸ್ಟ್ 2022, 14:48 IST
ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)
ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)   

ಪಟ್ನಾ: ಎನ್‌ಡಿಎ ಜತೆಗಿನ ಮೈತ್ರಿಯನ್ನು ಮುರಿದು ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಸೇರುವ ಮೂಲಕ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಜನಾದೇಶವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ನಿತೀಶ್ ಕುಮಾರ್ ಅವರು 2017ರಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಆ ಪಕ್ಷದ ಜತೆಗಿನ ಮೈತ್ರಿ ಕಡಿದುಕೊಂಡಿದ್ದರು. ಈಗ ಅದೇ ಪಕ್ಷದ ಜತೆ ಸೇರಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ನಿತೀಶ್ ಕುಮಾರ್ ಅವರನ್ನು ‘ಪಲ್ಟೂ ರಾಮ್ (ಆಗಾಗ ಪಾಳೆಯ ಬದಲಿಸುತ್ತಿರುವವರು)’ ಎಂದು ಬಿಜೆಪಿ ಲೇವಡಿ ಮಾಡಿದೆ.

ADVERTISEMENT

ಹಿಂದೆ ನಿತೀಶ್ ಆಪ್ತರಾಗಿದ್ದ ಆರ್‌ಸಿಪಿ ಸಿಂಗ್ ಸಹ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, 2020ರ ವಿಧಾನಸಭೆ ಚುನಾವಣೆಯಲ್ಲಿ ಜನತೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮತ ನೀಡಿದ್ದರು. ಇದೀಗ ಮುಖ್ಯಮಂತ್ರಿಗಳು ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಟೀಕಿಸಿದ್ದಾರೆ.

ನಿತೀಶ್ ಕುಮಾರ್ ಅವರನ್ನು 1996ರಲ್ಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಒಪ್ಪಿಕೊಂಡಿತ್ತು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ನಮ್ಮ ಸಂಖ್ಯಾಬಲ ಜಾಸ್ತಿ ಇದ್ದರೂ ಅವರನ್ನು (ನಿತೀಶ್) 2020ರಲ್ಲಿ ಮುಖ್ಯಮಂತ್ರಿಯನ್ನಾಗಿ ಸ್ವೀಕರಿಸಿದ್ದೆವು. ಇದೀಗ ಅವರಿಗೆ ನಮ್ಮ ಜತೆ ಸಮಸ್ಯೆ ಉದ್ಭವಿಸಿರುವುದಾಗಿ ಹೇಳುತ್ತಿದ್ದಾರೆ ಎಂದು ಸಿಂಗ್ ಕಿಡಿ ಕಾರಿದ್ದಾರೆ.

2013ರಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷೆಯೊಂದಿಗೆ ಬಿಜೆಪಿ ಜತೆ ಮೈತ್ರಿ ಕಡಿದುಕೊಂಡರು. ಇದೀಗ ಮತ್ತೆ ಅದೇ ಆಸೆಯೊಂದಿಗೆ ಮೈತ್ರಿ ಮುರಿದಿದ್ದಾರೆ. ಅವರೊಬ್ಬ ‘ಪಲ್ಟೂ ರಾಮ್’ ಎಂದು ಗಿರಿರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ.

2020ರ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಲಾಗಿತ್ತು. ನಾವು (ಬಿಜೆಪಿ) ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದೆವು. ಆದರೂ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಿದ್ದೆವು. ಇಂದು ಅವರು ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿಯ ಬಿಹಾರ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.