ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡ ಕಾರಣ ಸಂಪುಟದಿಂದ ಹೊರನಡೆದಿದ್ದ ಕೇಂದ್ರದ ಮಾಜಿ ಸಚಿವ ಆರ್‌ಸಿಪಿ ಸಿಂಗ್ ಅವರು 'ಆಪ್ ಸಾಬ್‌ಕಿ ಅವಾಜ್' ಎಂಬ ಹೊಸ ಪಕ್ಷವನ್ನು ಗುರುವಾರ ಘೋಷಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಂಗ್, ಪಕ್ಷ ಘೋಷಣೆಗೆ ದೀಪಾವಳಿ ಮುನ್ನಾದಿನವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹಾಗೂ ಈ ದಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನವೂ ಹೌದು ಎಂದು ಹೇಳಿದ್ದಾರೆ.
ತಮ್ಮ ಪಕ್ಷವು ಬಿಹಾರದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಎದುರು ನೋಡುತ್ತಿದೆ. ಇಲ್ಲಿನ 243 ಸ್ಥಾನಗಳಿಗೆ 140 ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ತಯಾರಿದ್ದಾರೆ ಎಂದಿದ್ದಾರೆ.
ನಿತೀಶ್ ಕುಮಾರ್ ಅವರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿದ್ದ ಆರ್‌ಪಿಸಿ ಸಿಂಗ್, 2023ರಲ್ಲಿ ಬಿಜೆಪಿ ಸೇರಿದ್ದರು. ಆದರೆ ಅವರು, ನಿತೀಶ್ ಕುಮಾರ್ ಅವರ ಜೆಡಿಯು ಜೊತೆಗಿನ ನಂಟು, ನಂತರ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.
ನಿತೀಶ್ ಕುಮಾರ್ ಅವರಂತೆ ಬಿಹಾರದ ನಳಂದ ಜಿಲ್ಲೆಯವರೇ ಆದ ಸಿಂಗ್, ಉತ್ತರ ಪ್ರದೇಶ ಕೆಡರ್‌ನ ಐಎಎಸ್ ಅಧಿಕಾರಿ.
2005ರಲ್ಲಿ ಅಧಿಕಾರಕ್ಕೇರಿದ್ದ ನಿತೀಶ್, ಸಿಂಗ್ ಅವರ ಆಡಳಿತ ಶೈಲಿಯನ್ನು ಮೆಚ್ಚಿದ್ದರು. ಬಳಿಕ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು.
2010ರಲ್ಲಿ ಸ್ವಯಂ ನಿವೃತ್ತಿ ಪಡೆದ ಸಿಂಗ್, ಜೆಡಿಯು ಸೇರಿದ್ದರು. ಬಳಿಕ ಸತತ ಎರಡು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು.
ಸಿಂಗ್ ಅವರು 2021ರಲ್ಲಿ ನರೇಂದ್ರ ಮೋದಿ ಸಂಪುಟ ಸೇರಿದ ಬಳಿಕ, ನಿತೀಶ್ ಜೊತೆಗಿನ ಸಂಬಂಧ ಹಳಸಿತ್ತು. ಇದು, ಸಿಂಗ್ ಅವರನ್ನು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಲವೇ ತಿಂಗಳಲ್ಲಿ ಕೆಳಗಿಳಿಯುವಂತೆ ಹಾಗೂ ಮತ್ತೊಂದು ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗದಂತೆ ಮಾಡಿತು.
ಬಳಿಕ ಸಿಂಗ್ ಅವರು ಬಿಜೆಪಿಗೆ ಸೇರಿದ್ದರು.
2024ರ ಲೋಕಸಭೆ ಚುನಾವಣೆ ಬಳಿಕ, ರಚನೆಯಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಜೆಡಿಯು ಪ್ರಮುಖ ಪಕ್ಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.