ADVERTISEMENT

ಬಿಹಾರ ರಾಜಕೀಯ: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2022, 12:22 IST
Last Updated 9 ಆಗಸ್ಟ್ 2022, 12:22 IST
ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
ನಿತೀಶ್ ಕುಮಾರ್ (ಸಂಗ್ರಹ ಚಿತ್ರ)   

ಪಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಮಂಗಳವಾರ ಸಂಜೆ ರಾಜೀನಾಮೆ ನೀಡಿದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜತೆ ರಾಜಭವನಕ್ಕೆ ತೆರಳಿದ ಅವರು ರಾಜೀನಾಮೆ ಸಲ್ಲಿಸಿದರು.

ಬಳಿಕ ಮಾಧ್ಯಮದವರ ಜತೆ ಮಾತನಾಡಿ, ಎನ್‌ಡಿಎ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಘೋಷಿಸಿದರು.ಇದರೊಂದಿಗೆ, ಬಿಜೆಪಿ ಜತೆಗಿನ ಮೈತ್ರಿ ಕೊನೆಗೊಳಿಸಿರುವ ಬಗ್ಗೆ ಜೆಡಿ(ಯು) ಅಧಿಕೃತವಾಗಿ ಘೋಷಣೆ ಮಾಡಿದಂತಾಗಿದೆ.

ADVERTISEMENT

ಎಲ್ಲ ಸಂಸದರು, ಶಾಸಕರು ಒಮ್ಮತಕ್ಕೆ ಬಂದ ಬಳಿಕವೇ ಎನ್‌ಡಿಎ ಮೈತ್ರಿಕೂಟ ತೊರೆಯುವ ನಿರ್ಧಾರಕ್ಕೆ ಬರಲಾಗಿದೆ. ಇದಾದ ಬಳಿಕವೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ ಎಂದು ನಿತೀಶ್ ಕುಮಾರ್ ಹೇಳಿದರು.

ಬಳಿಕ ಅವರುಪಟ್ನಾದಲ್ಲಿರುವ ರಾಬ್ರಿ ದೇವಿ (ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ ಯಾದವ್ ಅವರ ಪತ್ನಿ)ಅವರ ನಿವಾಸಕ್ಕೆ ತೆರಳಿದರು.

ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಟ್ವೀಟ್ ಮಾಡಿದ್ದ ಜೆಡಿ(ಯು) ನಾಯಕ ಉಪೇಂದ್ರ ಕುಶ್ವಾಹ, ಹೊಸ ಒಕ್ಕೂಟದ ನಾಯಕತ್ವ ವಹಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರಿಗೆ ಅಭಿನಂದನೆಗಳು ಎಂದು ಉಲ್ಲೇಖಿಸಿದ್ದರು.

‘ಹೊಸ ರೂಪದಲ್ಲಿ ಹೊಸ ಒಕ್ಕೂಟದ ನಾಯಕತ್ವದ ಹೊಣೆಗಾರಿಕೆ ವಹಿಸಿಕೊಳ್ಳುತ್ತಿರುವುದಕ್ಕಾಗಿ ನಿತೀಶ್ ಕುಮಾರ್ ಅವರಿಗೆ ಅಭಿನಂದನೆಗಳು. ನಿತೀಶ್ ಅವರೇ, ಹೀಗೆಯೇ ಮುಂದುವರಿಯಿರಿ. ದೇಶ ನಿಮಗಾಗಿ ಕಾಯುತ್ತಿದೆ’ ಎಂದು ಕುಶ್ವಾಹ ಟ್ವೀಟ್‌ನಲ್ಲಿ ಬರೆದಿದ್ದರು.

ಭಾನುವಾರದಿಂದ ಕ್ಷಿಪ್ರ ರಾಜಕೀಯ ಬೆಳವಣಿಗೆ

ಜೆಡಿ(ಯು) ಪಕ್ಷಕ್ಕೆ ಆರ್‌.ಸಿ.ಪಿ. ಸಿಂಗ್‌ ರಾಜೀನಾಮೆ ಸಲ್ಲಿಸಿದ ಬಳಿಕ ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಾಗಿದ್ದವು. ನಿತೀಶ್ ಕುಮಾರ್ ಅವರು ಭಾನುವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡರೆ ಅವರ ಜೆಡಿ(ಯು) ಪಕ್ಷವನ್ನು ಅಪ್ಪಿಕೊಳ್ಳಲು ಸಿದ್ಧ ಎಂದು ಪ್ರತಿಪಕ್ಷ ಆರ್‌ಜೆಡಿ ಸೋಮವಾರ ಬಹಿರಂಗವಾಗಿ ಘೋಷಣೆ ಮಾಡಿತ್ತು. ಇದಾದ ಬಳಿಕ ಮಂಗಳವಾರ ಬೆಳಿಗ್ಗೆ ಜೆಡಿ(ಯು), ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದವು. ಸಭೆಯ ಬಳಿಕ ಬಿಜೆಪಿ ಜತೆಗಿನ ಮೈತ್ರಿಯನ್ನು ಜೆಡಿ(ಯು) ಕಡಿದುಕೊಳ್ಳಲಿರುವ ಸ್ಪಷ್ಟ ಸಂದೇಶ ಹೊರಬಿದ್ದಿತ್ತು ಎಂದು ಮೂಲಗಳು ಹೇಳಿವೆ.

ಬಿಹಾರ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ

ಜೆಡಿಯುನಲ್ಲಿ 45 ಶಾಸಕರಿದ್ದರೆ ಆರ್‌ಜೆಡಿಯಲ್ಲಿ 79 ಶಾಸಕರಿದ್ದು, ಬಿಹಾರ ವಿಧಾನಸಭೆಯಲ್ಲೇ ಅತ್ಯಂತ ದೊಡ್ಡ ಪಕ್ಷ ಎನಿಸಿದೆ. ಎರಡೂ ಪಕ್ಷಗಳು ಒಟ್ಟಾದರೆ 124 ಶಾಸಕರ ಬಲ ಆ ಮೈತ್ರಿಗೆ ದೊರೆಯಲಿದೆ. ಇನ್ನು ಕಾಂಗ್ರೆಸ್‌ (19 ಶಾಸಕರು) ಮತ್ತು ಎಡಪಕ್ಷಗಳು (16 ಶಾಸಕರು) ಸಹ ಬೆಂಬಲ ನೀಡುವುದಾಗಿ ಹೇಳಿವೆ.ಉಳಿದಂತೆ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ 77 ಶಾಸಕರನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.