ADVERTISEMENT

ಪಾಸ್‌ಪೋರ್ಟ್‌ ನೀಡುವಂತೆ ಕೋರ್ಟ್‌ಗೆ ಲಾಲು ಮನವಿ; ಕಿಡ್ನಿ ಕಸಿಗಾಗಿ ವಿದೇಶ ಪ್ರಯಾಣ

ಪಿಟಿಐ
Published 6 ಜೂನ್ 2022, 14:19 IST
Last Updated 6 ಜೂನ್ 2022, 14:19 IST
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌   

ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರು ತಮ್ಮ ಪಾಸ್‌ಪೋರ್ಟ್‌ ಬಿಡುಗಡೆ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇರುವುದಾಗಿ ಲಾಲು ಪರ ವಕೀಲರು ತಿಳಿಸಿದ್ದಾರೆ.

ಮೇವು ಹಗರಣಕ್ಕೆ ಸಂಬಂಧಿಸಿ ಡೊರಾಂಡ ಖಜಾನೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ (73) ಅವರಿಗೆ ಏಪ್ರಿಲ್‌ 22ರಂದು ಜಾರ್ಖಂಡ್‌ ಹೈಕೋರ್ಟ್‌ ಜಾಮೀನು ನೀಡಿದೆ. ಸಿಬಿಐ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಲಾಲು ಅವರಿಗೆ ಐದು ವರ್ಷ ಸಜೆ ವಿಧಿಸಿತ್ತು.

'ಪಾಸ್‌ಪೋರ್ಟ್‌ ನವೀಕರಣಕ್ಕಾಗಿ ಲಾಲು ಪ್ರಸಾದ್‌ ಅವರು ಸಿಬಿಐ ವಿಶೇಷ ನ್ಯಾಯಲಯಕ್ಕೆ ಮನವಿ ಮಾಡಿದ್ದಾರೆ. ನವೀಕರಣದ ಬಳಿಕ ಪಾಸ್‌ಪೋರ್ಟ್‌ ಅನ್ನು ಮತ್ತೆ ಕೋರ್ಟ್‌ಗೆ ಸಲ್ಲಿಸುವುದಾಗಿ ಅರ್ಜಿಯಲ್ಲಿ ಕೋರಲಾಗಿದೆ' ಎಂದು ವಕೀಲ ಪ್ರಭಾತ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

'ಇದು ಮೂತ್ರಪಿಂಡ ವೈಫಲ್ಯ ಪ್ರಕರಣವಾಗಿದ್ದು, ಅವರು ಚಿಕಿತ್ಸೆಗಾಗಿ ಅಥವಾ ಮೂತ್ರಪಿಂಡ ಕಸಿಗಾಗಿ ವಿದೇಶಕ್ಕೆ ತೆರಳಬೇಕಾಗಬಹುದು. ವೈದ್ಯರ ಭೇಟಿಗೆ ಅವಕಾಶ ಸಿಕ್ಕರೆ, ವಿದೇಶಕ್ಕೆ ಚಿಕಿತ್ಸೆಗಾಗಿ ತೆರಳಲು ಅನುಮತಿಯನ್ನು ಹಾಗೂ ಪಾಸ್‌ಪೋರ್ಟ್‌ ಬಿಡುಗಡೆ ಮಾಡುವಂತೆ ಕೋರುತ್ತೇವೆ' ಎಂದಿದ್ದಾರೆ.

ಪಾಸ್‌ಪೋರ್ಟ್‌ ಬಿಡುಗಡೆ ಮನವಿ ಅರ್ಜಿಯ ವಿಚಾರಣೆಯು ಜೂನ್‌ 10ಕ್ಕೆ ನಿಗದಿಯಾಗಿದೆ.

ಲಾಲು ಪ್ರಸಾದ್‌ ಅವರು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೂತ್ರಪಿಂಡದ ಕಾಯಿಲೆಯು ನಾಲ್ಕನೇ ಹಂತದಲ್ಲಿದೆ. ತಜ್ಞರ ಪ್ರಕಾರ, ಅವರ ಮೂತ್ರಪಿಂಡವು ಶೇಕಡ 20ರಷ್ಟು ಸಾಮರ್ಥ್ಯದ ಕಾರ್ಯಾಚರಣೆಯನ್ನಷ್ಟೇ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.