ನವದೆಹಲಿ: ಬಿಹಾರದ 17 ಬಾಲಮಂದಿರಗಳಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಸಿಬಿಐ, ಈ ಸಂಬಂಧ ಕೆಲವು ಜಿಲ್ಲಾಧಿಕಾರಿಗಳು ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮುಜಫ್ಫರ್‌ಪುರ ಮತ್ತು ಮೋತಿಹಾರಿ ಬಾಲಮಂದಿರದ ಪ್ರಕರಣಗಳಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸಿಬಿಐ ಮಾಹಿತಿ ನೀಡಿದೆ.
‘ಹಲವು ಪ್ರಕರಣಗಳಲ್ಲಿ, ಸರ್ಕಾರಿ ಅಧಿಕಾರಿಗಳು ಮತ್ತು ಬಾಲಮಂದಿರಗಳನ್ನು ನಡೆಸುವ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ಸಾರಾಸಗಟು ನಿರ್ಲಕ್ಷ್ಯ ವಹಿಸಿರುವುದಕ್ಕೆ ಪುರಾವೆಗಳು ಲಭಿಸಿವೆ. ಇದರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ಬಿಹಾರ ಸರ್ಕಾರಕ್ಕೆ ವರದಿ ನೀಡಲಾಗಿದೆ. ಎನ್‌ಜಿಒಗಳ ನೋಂದಣಿ ರದ್ದುಗೊಳಿಸುವಂತೆಯೂ ಶಿಫಾರಸು ಮಾಡಲಾಗಿದೆ’ ಎಂದು ಸಿಬಿಐ ಹೇಳಿದೆ.
13 ಪ್ರಕರಣಗಳಲ್ಲಿ ಅಂತಿಮ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಿದೆ.
ಪ್ರಕರಣಗಳ ತನಿಖೆ ಪೂರ್ಣಗೊಂಡಿರುವುದರಿಂದ ತನಿಖೆ ನಡೆಸುತ್ತಿದ್ದ ಸಿಬ್ಬಂದಿಯನ್ನು ಇತರ ಸೇವೆಗಳಿಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆಯೂ ಸಿಬಿಐ ಸುಪ್ರೀಂ ಕೋರ್ಟ್ ಅನ್ನು ಕೋರಿದೆ.
ಬಿಹಾರದ ಕೆಲ ಬಾಲ ಮಂದಿರಗಳಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳ ತನಿಖೆ ನಡೆಸಬೇಕೆಂದು ನಿರ್ದೇಶಿಸಿ ಸುಪ್ರೀಂ ಕೋರ್ಟ್ 2018ರ ನವೆಂಬರ್‌ನಲ್ಲಿ ಸಿಬಿಐಗೆ ಆದೇಶ ನೀಡಿತ್ತು. ಟಾಟಾ ಸಮಾಜವಿಜ್ಞಾನ ಸಂಸ್ಥೆಯ ವರದಿಯೊಂದರ ಮೂಲಕ ಬಾಲಮಂದಿರದಲ್ಲಿ ನಡೆಯುತ್ತಿರುವ ದೈಹಿಕ ಮತ್ತು ಲೈಂಗಿಕ ಶೋಷಣೆಗಳು ಬೆಳಕಿಗೆ ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.