ಜೆಹಾನಾಬಾದ್ (ಬಿಹಾರ): ಜೆಹಾನಾಬಾದ್ ಜಿಲ್ಲೆಯ ಬಾಬಾ ಸಿದ್ಧೇಶ್ವರ ನಾಥ ದೇವಸ್ಥಾನದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂವಿನ ವ್ಯಾಪಾರಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಾವಡ್ ಯಾತ್ರಿಕರು ಮತ್ತು ಹೂವು ಮಾರಾಟಗಾರರ ನಡುವೆ ನಡೆದ ಘರ್ಷಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲಂಕೃತಾ ಪಾಂಡೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೊದಲ ಬಂಧನ ಇದಾಗಿದೆ. ತಲೆಮರೆಸಿಕೊಂಡಿರುವ ಇತರ ಹೂವಿನ ವ್ಯಾಪಾರಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಾಗೂ ಘಟನೆ ನಡೆದ ಸಮಯದಲ್ಲಿ ಅಲ್ಲಿದ್ದವರ ಹೇಳಿಕೆಯನ್ನು ದಾಖಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ.
ಇಲ್ಲಿಯ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 7 ಜನ ಮೃತಪಟ್ಟು, 16 ಮಂದಿ ಗಾಯಗೊಂಡಿದ್ದರು.
ಈ ನಡುವೆ ದೇವಸ್ಥಾನದಲ್ಲಿ ಆ ದಿನ ನಿಖರವಾಗಿ ಏನಾಯಿತು ಎಂಬುದನ್ನು ತೋರಿಸುವ ವಿಡಿಯೊ ಕ್ಲಿಪ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕಿರಿದಾದ ಮಾರ್ಗದಲ್ಲಿ ಭಕ್ತರು ಹೊರಬರಲು ಪರದಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಕಂಡು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.