ADVERTISEMENT

ಬಿಹಾರದಲ್ಲಿ ಬಂಧಿತ ಶಂಕಿತ ಉಗ್ರರಿಗೆ ಪಾಕ್ ಜೊತೆ ನಂಟು ಬಹಿರಂಗ

ಐಎಎನ್ಎಸ್
Published 16 ಜುಲೈ 2022, 5:14 IST
Last Updated 16 ಜುಲೈ 2022, 5:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಬಿಹಾರದ ಪುಲ್ವಾರಿ ಷರೀಫ್ ಪ್ರದೇಶದಲ್ಲಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದಲ್ಲಿ ಬಂಧಿತ ಆರೋಪಿಗಳಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ನಂಟು ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಬಿಹಾರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಏಳು ಮಂದಿಯನ್ನು ಬಂಧಿಸಲಾಗಿತ್ತು.

ಈ ಪೈಕಿ ಮರ್ಗೂವ್ ಅಹ್ಮದ್ ಡ್ಯಾನಿಶ್ ಅಲಿಯಾಸ್ ತಾಹೀರ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಯುವಕರೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

ಮರ್ಗೂವ್, 2016ರಿಂದ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತು ಇ-ಮೇಲ್ ಮೂಲಕ ಪಾಕಿಸ್ತಾನಿ ಯುವಕರೊಂದಿಗೆ ಸಂಪರ್ಕದಲ್ಲಿದ್ದರು. ಇದಕ್ಕಾಗಿ 'ಗಜ್ವಾ-ಇ-ಹಿಂದ್' ಎಂಬ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದರು. ಅದರಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಹಲವಾರು ಯುವಕರನ್ನು ಸೇರ್ಪಡೆಗೊಳಿಸಲಾಗಿತ್ತು ಎಂದು ಪಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಾನವಜೀತ್ ಸಿಂಗ್ ಧಿಲ್ಲೋನ್ ತಿಳಿಸಿದ್ದಾರೆ.

ತಮ್ಮ ವಾಟ್ಸಪ್ ಗ್ರೂಪ್‌ನಲ್ಲಿ ಪ್ರಚೋದನಕಾರಿ ಆಡಿಯೊ ಹಾಗೂ ವಿಡಿಯೊ ಸಂದೇಶಗಳನ್ನು ರವಾನಿಸುತ್ತಿದ್ದರು. ಪಾಕಿಸ್ತಾನದ 'ತಹ್ರೀಕ್-ಇ-ಲಾಬೈಕ್', ಹಾಗೂ ಪಾಕ್ ಪ್ರಜೆ ಫೈಜಾನ್ ಎಂಬವರೊಂದಿಗೂ ನಂಟು ಹೊಂದಿದ್ದರು ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ನಾ ಪೊಲೀಸರು 26 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದುವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಜಲಾಲುದ್ದೀನ್, ಸಿಮಿ ಸಂಘಟನೆಯ ಅಥರ್ ಪರ್ವೇಜ್, ಶಮೀಮ್ ಅಖ್ತರ್, ಅರ್ಮಾನ್ ಮಲಿಕ್, ತಾಹೀರ್ ಅಹ್ಮದ್ ಮತ್ತು ಶಬ್ಬೀರ್ ಮಲಿಕ್ ಬಂಧಿತ ಆರೋಪಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.