ಖಗಾರಿಯ (ಬಿಹಾರ): ಬಿಹಾರದಲ್ಲಿ ಗುರುವಾರ ರೈಲ್ವೆ ಪ್ರಯಾಣಿಕರೊಬ್ಬರ ಮೊಬೈಲ್ ಕಸಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಬೋಗಿಗೆ ಜೋತುಬಿದ್ದು ತ್ರಿಶಂಕು ಸ್ಥಿತಿ ಅನುಭವಿಸಬೇಕಾಯಿತು. ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯ ಕೈಗಳನ್ನು ಪ್ರಯಾಣಿಕರು ಕಿಟಕಿಯೊಳಗಿಂದ ಹಿಡಿದಿದ್ದರು. ಹೀಗಾಗಿ, ರೈಲು ಚಲಿಸುತ್ತಿದ್ದರು ಆತ ಕಿಟಕಿಯಲ್ಲಿ ನೇತಾಡಿ ಒದ್ದಾಡುವಂತಾಯಿತು.
ಕ್ಷಮಿಸುವಂತೆ, ಬಿಟ್ಟುಬಿಡುವಂತೆ, ಜೀವ ಉಳಿಸುವಂತೆ ಎಷ್ಟು ಕೇಳಿಕೊಂಡರೂ ಪ್ರಯಾಣಿಕರು ಆತನನ್ನು ಬಿಟ್ಟಿಲ್ಲ. ನಂತರ ಮುಂದಿನ ನಿಲ್ದಾಣದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ರೈಲು ಬೆಗುಸರಾಯ್‌ನಿಂದ ಖಗರಿಯಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ಸತ್ಯಮ್ ಕುಮಾರ್ ಎಂಬಾತ ಕಳ್ಳತನಕ್ಕೆ ಯತ್ನಿಸಿದ್ದ. ಕಿಟಕಿಯೊಳಗಿಂದ ಕೈಬಿಟ್ಟು ಮೊಬೈಲ್ ಕಸಿಯಲು ಯತ್ನಿಸಿದ್ದ. ಕೂಡಲೇ ಎಚ್ಚೆತ್ತ ಪ್ರಯಾಣಿಕರು ಸತ್ಯಮ್‌ನ ಕೈಗಳನ್ನು ಕಿಟಕಿಯಿಂದ ಎಳೆದು ಹಿಡಿದುಕೊಂಡಿದ್ದರು. ರೈಲು ಚಲಿಸಿದರೂ ಆತನ ಕೈಗಳನ್ನು ಬಿಡಲಿಲ್ಲ. ಹೀಗಾಗಿ ಆತ ಬೋಗಿಗೇ ನೇತಾಡುವಂತಾಗಿದೆ. ಈ ಬಗ್ಗೆ ಹಲವು ವೆಬ್‌ಸೈಟ್‌ಗಳಲ್ಲಿ ವರದಿಯಾಗಿದೆ.
ಸುಮಾರು 10 ಕಿಲೋಮೀಟರ್‌ಗಳವರೆಗೆ ಆತ ನೇತಾಡುತ್ತಲೇ ಇದ್ದ ಎನ್ನಲಾಗಿದೆ. ರೈಲು ಖಗರಿಯಕ್ಕೆ ಬಂದ ಕೂಡಲೇ ಅತನನ್ನು ಪೊಲೀಸರಿಗೆ ಹಿಡಿದುಕೊಡಲಾಗಿದೆ. ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.