ಪಟ್ನಾ: ಬಿಹಾರದ ಮೈತ್ರಿ ರಾಜಕಾರಣವು ಅತ್ಯಂತ ಕುತೂಹಲಕರ ಘಟ್ಟದಲ್ಲಿದ್ದು ಈ ನಡುವೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಶಾಸಕರು, ಸಂಸದರು ಹಾಗೂ ಮಾಜಿ ಶಾಸಕರ ಸಭೆಯನ್ನು ಶನಿವಾರ ಕರೆದಿವೆ.
ಬಿಹಾರ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಸಮರ್ಥ ಚೌಧರಿ ಅವರು ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಪಕ್ಷದ ಶಾಸಕರು, ಸಂಸದರು ಹಾಗೂ ಹಿರಿಯ ಮುಖಂಡರ ಸಭೆ ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್‌ನಿಂದ ಹೊರಬಂದು ಬಿಜೆಪಿ ಜೊತೆ ಸರ್ಕಾರ ಮಾಡುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಸುದ್ದಿಗಾರರು ಕೇಳಿದಾಗ, ಅಂತಹ ಯಾವುದೇ ವಿಷಯವನ್ನು ನಾವು ಚರ್ಚಿಸುವುದಿಲ್ಲ, ನಮ್ಮ ರಾಷ್ಟ್ರೀಯ ನಾಯಕರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಚೌಧರಿ ಹೇಳಿದರು.
ರಾಜಕೀಯದಲ್ಲಿ ಎಂದಿಗೂ ಶಾಶ್ವತವಾಗಿ ಬಾಗಿಲು ಮುಚ್ಚುವುದಿಲ್ಲ. ಸಮಯ ಬಂದಾಗ ಬಾಗಿಲು ತೆರೆಯುತ್ತದೆ. ಇದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಸುದ್ದಿಗಾರರಿಗೆ ನಿನ್ನೆ ಪ್ರತಿಕ್ರಿಯೆ ನೀಡಿದ್ದರು. ಈ ಮೂಲಕ ಅವರು ಎನ್‌ಡಿಎ ಮೈತ್ರಿ ಸೇರಲು ಜೆಡಿಯು ಬಂದರೆ ಸ್ವಾಗತಿಸುವ ಸಂದೇಶವನ್ನು ರವಾನಿಸಿದ್ದರು.
ಕಾಂಗ್ರೆಸ್ ಸಭೆ
ಮತ್ತೊಂದು ಬೆಳವಣಿಗೆಯಲ್ಲಿ, ಬಿಹಾರ ಕಾಂಗ್ರೆಸ್ ಮುಖಂಡ ಶಕೀಲ್ ಅಹ್ಮದ್ ಖಾನ್ ಅವರು ಶನಿವಾರ ಮಧ್ಯಾಹ್ನ 2 ಗಂಟೆಗೆ ಪುರ್ಣಿಯ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಮಾಜಿ ಶಾಸಕರ ಸಭೆ ಕರೆದಿದ್ದಾರೆ.
ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಈ ಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.
ಜನವರಿ 29ರಂದು ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ‘ಯಾತ್ರೆ ರಾಜ್ಯ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯಲಾಗಿದೆ ಎಂದು ಖಾನ್ ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ನಲ್ಲಿಯೇ ಮುಂದುವರಿಯುತ್ತಾರೋ ಅಥವಾ ಅದನ್ನು ತ್ಯಜಿಸಿ, ಬಿಜೆಪಿ ಯೊಂದಿಗೆ ಕೈ ಜೋಡಿಸಿ ಅಧಿಕಾರ ದಲ್ಲಿ ಉಳಿಯುತ್ತಾರೋ ಎಂಬ ಕೌತುಕ ಮುಂದುವರಿದಿದೆ.
ಊಹಾಪೋಹಕ್ಕೆ ಕಾರಣ ಏನು?
ಪಟ್ನಾದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಅವರು ದೂರದಲ್ಲಿ ಕುಳಿತಿದ್ದರು. ಇದು ಸರ್ಕಾರದ ಮೈತ್ರಿ ಪಕ್ಷಗಳ ನಡುವೆ ಬಿಕ್ಕಟ್ಟು ಮೂಡಿರಬಹುದು ಎಂಬುದನ್ನು ಬಿಂಬಿಸಿತ್ತು. ನಂತರ ರಾಜ್ಯಪಾಲರು ಆಯೋಜಿಸಿದ್ದ ಚಹಾ ಕೂಟದಲ್ಲಿ ನಿತೀಶ್ ಅವರು ಪಾಲ್ಗೊಂಡಿದ್ದರೆ, ಉಪ ಮುಖ್ಯಮಂತ್ರಿ ಗೈರಾಗಿದ್ದರು. ಈ ಎರಡೂ ಬೆಳವಣಿಗೆಗಳು ಬಿಹಾರದ ರಾಜಕೀಯದಲ್ಲಿ ಊಹಾಪೋಹ ತೀವ್ರ ಗೊಳ್ಳುವಂತೆ ಮಾಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.