ADVERTISEMENT

ಬಿಹಾರ: ಉದ್ಯೋಗ ಬೇಕೆಂದ ಯುವಕನನ್ನು ವಂಚಕರು ಮಾಡಿದ್ದು ಐಪಿಎಸ್ ಅಧಿಕಾರಿಯನ್ನಾಗಿ!

ಬಿಹಾರದ ವಂಚಕರಿಂದ ಬೆಪ್ಪಾದ ಯುವಕ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2024, 3:22 IST
Last Updated 21 ಸೆಪ್ಟೆಂಬರ್ 2024, 3:22 IST
<div class="paragraphs"><p>ಪೊಲೀಸ್ ವಶದಲ್ಲಿ ಮಿಥಿಲೇಶ್ (ಮಧ್ಯದಲ್ಲಿ)</p></div>

ಪೊಲೀಸ್ ವಶದಲ್ಲಿ ಮಿಥಿಲೇಶ್ (ಮಧ್ಯದಲ್ಲಿ)

   

ಬೆಂಗಳೂರು: ಐಪಿಎಸ್ ಅಧಿಕಾರಿ ವೇಷದಲ್ಲಿ ಅಲೆಯುತ್ತಿದ್ದ ಯುವಕನೊಬ್ಬನನ್ನು ಬಿಹಾರ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಮಿಥಿಲೇಶ್ ಮಾಂಜಿ ಎಂಬ 18 ವರ್ಷದ ಯುವಕನೇ ಬಂಧಿತ. ಬಿಹಾರದ ಜುಮಾಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ADVERTISEMENT

ಪೊಲೀಸ್ ಆಗಬೇಕೆಂಬ ಕನಸು ಹೊಂದಿದ್ದ ಮಿಥಿಲೇಶ್, ಅದಕ್ಕಾಗಿ ಕಷ್ಟಪಟ್ಟು ಓದಿ ಯಶಸ್ಸು ಸಾಧಿಸುವುದು ಬಿಟ್ಟು ಎಡವಟ್ಟು ಮಾಡಿಕೊಂಡಿದ್ದಾನೆ.

ಕೆಲ ದಿನಗಳ ಈತ ಯಾರದೋ ಮಾತು ನಂಬಿ ಉದ್ಯೋಗ ಕೊಡಿಸುವ ವಂಚಕರ ಜಾಲವನ್ನು ಸಂಪರ್ಕಿಸಿದ್ದಾನೆ. ಈತನ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಂಡ ವಂಚಕರು, ₹2 ಲಕ್ಷ ಪಡೆದು ಐಪಿಎಸ್ ಅಧಿಕಾರಿಗಳು ಹಾಕಿಕೊಳ್ಳುವ ಡ್ರೆಸ್ ಹಾಗೂ ನಕಲಿ ಪಿಸ್ತೂಲ್‌ ಅನ್ನು ಮಿಥಿಲೇಶನಿಗೆ ನೀಡಿದ್ದಾರೆ. ಬಳಿಕ ‘ಸದ್ಯ ನೀನು ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿರುತ್ತಿಯ. ಜಿಲ್ಲೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಿರು‘ ಎಂದು ವಂಚಕರು ಹೇಳಿದ್ದಾರೆ.

ಮಿಥಿಲೇಶ್ ಹಿಂದೂ ಮುಂದು ನೋಡದೇ ವಂಚಕರು ನೀಡಿದ ಐಪಿಎಸ್ ಡ್ರೆಸ್‌ ಅನ್ನು ಹಾಕಿಕೊಂಡು, ಪಿಸ್ತೂಲ್ ಇಟ್ಟುಕೊಂಡು ಪಲ್ಸರ್ ಬೈಕ್ ಏರಿ ತನ್ನ ಊರಾದ ಲಖಿಸಾರಿ ಜಿಲ್ಲೆಯ ಗೋವರ್ಧನ್ ಬಿಘಾಕ್ಕೆ ತೆರಳಿದ್ದಾನೆ. ಬಳಿಕ ತನ್ನ ತಾಯಿಯನ್ನು ಭೇಟಿಯಾಗಿ ತಾನು ಐಪಿಎಸ್ ಅಧಿಕಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಅದೇ ಉಡುಗೆಯಲ್ಲಿ ವಾಪಸ್ ಜುಮಾಯಿಗೆ ಬಂದಿದ್ದ ಮಿಥಿಲೇಶ್ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ ಒಂದಕ್ಕೆ ತೆರಳಿ ತಿಂಡಿ ತಿನ್ನುತ್ತಿದ್ದ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಮಿಥಿಲೇಶ್‌ನನ್ನು ಬಂಧಿಸಿದ್ದಾರೆ.

ಐಪಿಎಸ್ ಉಡುಗೆಯಲ್ಲಿ ಠಾಣೆಗೆ ಬಂದ ಮಿಥಿಲೇಶ್‌ನನ್ನು ಕಂಡು ಅಲ್ಲಿದ್ದ ಪೊಲೀಸರು ನಗೆ ಬೀರಿದ್ದಾರೆ. ನಕಲಿ ಪಿಸ್ತೂಲ್ ಹಾಗೂ ಡ್ರೆಸ್, ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸ್ ವಶದಲ್ಲಿರುವ ಮಿಥಿಲೇಶ್‌ ತನಗಾಗಿರುವ ವಂಚನೆಯನ್ನು ಹೇಳಿಕೊಂಡಿದ್ದಾನೆ.

ಈ ಬಗ್ಗೆ ವಿವರವಾದ ತನಿಖೆ ನಡೆಸುವುದಾಗಿ ಠಾಣೆಯ ಎಸ್‌ಡಿಪಿಒ ಸತೀಶ್ ಸುಮನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕುರಿತು ಎಬಿಪಿ ಲೈವ್ ವೆಬ್‌ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.