ನವದೆಹಲಿ: ‘ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಸೇತುವೆಗಳ ಕುಸಿತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಬಿಹಾರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ (ರಾಮ್ ವಿಲಾಸ್ ಪಾಸ್ವಾನ್) ಮುಖಂಡ ಚಿರಾಗ್ ಪಾಸ್ವಾನ್ ಒತ್ತಾಯಿಸಿದ್ದಾರೆ. ರಾಜ್ಯದ ಅಭಿವೃದ್ಧಿಯತ್ತ ಸಾಗಲು ದೂರದೃಷ್ಟಿಯ ಅಗತ್ಯವಿದೆ ಎಂದು ಈ ವೇಳೆ ಪ್ರತಿಪಾದಿಸಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮುನ್ನ ಜೆಡಿ(ಯು) ಪಕ್ಷದ ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಟು ಟೀಕಕಾರರಾಗಿದ್ದ ಚಿರಾಗ್, ‘ಮುಂದಿನ ವಿಧಾನಸಭಾ ಚುನಾವಣೆಯನ್ನು ಎನ್‌ಡಿಎ ಮೈತ್ರಿಕೂಟವು ನಿತೀಶ್ ಕುಮಾರ್ ನೇತೃತ್ವದಲ್ಲಿ ಎದುರಿಸಲಿದೆ. ಆದರೂ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆಯುಂಟಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯು 2025ರ ಅಂತ್ಯದಲ್ಲಿ ನಡೆಯಲಿದೆ.
ರಾಜ್ಯದಲ್ಲಿ ಹೆಚ್ಚಿದ ನಿರುದ್ಯೋಗ, ವಲಸೆ ಸಮಸ್ಯೆ, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶದ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಚಿರಾಗ್ ಪಾಸ್ವಾನ್, ‘ಬಿಹಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದರೆ, ಬಿಹಾರ ಏಕೆ ಹಿಂದುಳಿದಿದೆ? ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ಸಮಸ್ಯೆ ಏನೆಂದರೆ, ದೂರದೃಷ್ಟಿ ಇರಬೇಕು, ಅದನ್ನು ಜಾರಿಗೊಳಿಸುವ ಬದ್ಧತೆಯೂ ಇರಬೇಕು’ ಎಂದರು.
ವಿಶೇಷ ಸ್ಥಾನಮಾನಕ್ಕೆ ಬೆಂಬಲ: ‘ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದ ಕೇಂದ್ರ ಸಚಿವ, ನೀತಿ ಆಯೋಗದ ಶಿಫಾರಸ್ಸಿನಂತೆ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಇದರ ಬದಲಾಗಿ, ವಿಶೇಷ ಪ್ಯಾಕೇಜ್ ನೀಡಬಹುದು’ ಎಂದರು.
‘ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸೇತುವೆಗಳು ಮುರಿದುಬಿದ್ದಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕಾಮಗಾರಿಗಳ ಗುಣಮಟ್ಟದ ಕುರಿತಂತೆ ಹಲವು ಪ್ರಶ್ನೆಗಳು ಎದ್ದಿವೆ. ಇದೊಂದು ಗಂಭೀರ ವಿಚಾರವಾಗಿದೆ. ಇಂತಹ ಘಟನೆಗಳಿಂದ ರಾಜ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಏಕಕಾಲಕ್ಕೆ ಪ್ರವಾಹ, ಬರ ಪರಿಸ್ಥಿತಿ ತಲೆದೋರುತ್ತಿದ್ದು, ನದಿಗಳ ಜೋಡಣೆಯಿಂದ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.