ಗೋಧ್ರಾ: ಸುಪ್ರೀಂ ಕೋರ್ಟ್ ವಿಧಿಸಿರುವ ಗಡುವಿಗೆ ಅನುಗುಣವಾಗಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಜೈಲಿನ ಅಧಿಕಾರಿಗಳ ಮುಂದೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಅಪರಾಧಿಗಳು ಭಾನುವಾರ ತಡರಾತ್ರಿ ಶರಣಾಗಿದ್ದಾರೆ ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಎನ್‌ಎಲ್ ದೇಸಾಯಿ ಹೇಳಿದ್ದಾರೆ.
ಅಪರಾಧಿಗಳಿಗೆ ಕ್ಷಮಾದಾನ ನೀಡುವ ಪ್ರಕ್ರಿಯೆಯಲ್ಲಿ ಗುಜರಾತ್ ಸರ್ಕಾರವು ತನ್ನ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಜನವರಿ 8ರಂದು ಚಾಟಿ ಬೀಸಿದ್ದ ಸುಪ್ರೀಂ ಕೋರ್ಟ್, ಅಪರಾಧಿಗಳು ಮುಂದಿನ 2 ವಾರದೊಳಗೆ ಜೈಲಿಗೆ ಹಿಂದಿರುಗಬೇಕು ಎಂದು ಆದೇಶ ಹೊರಡಿಸಿತ್ತು.
ಪೊಲೀಸರಿಗೆ ಶರಣಾಗಲು ನೀಡಲಾಗಿರುವ ಸಮಯಾವಕಾಶವನ್ನು ವಿಸ್ತರಿಸುವಂತೆ ಕೋರಿ ಕಳೆದ ಶುಕ್ರವಾರ (ಜ.19) ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ನಿನ್ನೆ ತಡರಾತ್ರಿ 11 ಅಪರಾಧಿಗಳಾದ, ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್ ಜೈಲಿಗೆ ಶರಣಾಗಿದ್ದಾರೆ.
2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್‌ನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಸುರಕ್ಷಿತ ಜಾಗಕ್ಕೆ ತೆರಳುತ್ತಿದ್ದ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅವರ ಮೂರು ವರ್ಷದ ಮಗಳೂ ಸೇರಿದಂತೆ, ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಆಗ 21 ವರ್ಷದವರಾಗಿದ್ದ ಬಾನು, ಐದು ತಿಂಗಳ ಗರ್ಭಿಣಿಯೂ ಆಗಿದ್ದರು.
ಈ ಪ್ರಕರಣದ 11 ಅಪರಾಧಿಗಳಿಗೆ 2008ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಗುಜರಾತ್ ಸರ್ಕಾರದ ಆದೇಶದ ಮೇರೆಗೆ ಎಲ್ಲ ಅಪರಾಧಿಗಳು 2022ರ ಆಗಸ್ಟ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.