ADVERTISEMENT

Bilkis Bano Case | ಇಲ್ಲದ ಅಧಿಕಾರ ಬಳಸಿಕೊಂಡ ಗುಜರಾತ್ ಸರ್ಕಾರ: ಸುಪ್ರೀಂ ತರಾಟೆ

ಪಿಟಿಐ
Published 8 ಜನವರಿ 2024, 16:27 IST
Last Updated 8 ಜನವರಿ 2024, 16:27 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವರ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಪ್ರಕ್ರಿಯೆಯಲ್ಲಿ ಗುಜರಾತ್ ಸರ್ಕಾರವು ತನ್ನ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ ಕಟು ಮಾತುಗಳಲ್ಲಿ ಹೇಳಿದೆ.

11 ಮಂದಿಗೆ ಕ್ಷಮಾದಾನ ನೀಡಿದ್ದ ಗುಜರಾತ್ ಸರ್ಕಾರದ ಕ್ರಮವನ್ನು ರದ್ದುಪಡಿಸಿದೆ. ಗುಜರಾತ್ ಸರ್ಕಾರವು, ಕ್ಷಮಾದಾನ ನೀಡುವ ವಿಷಯದಲ್ಲಿ ಅಪರಾಧಿಯೊಬ್ಬನ ಜೊತೆ ‘ಶಾಮೀಲಾಗಿತ್ತು’ ಎಂದು ಹೇಳಿರುವ ಕೋರ್ಟ್‌, ಅಪರಾಧಿಗಳನ್ನು ಎರಡು ವಾರಗಳಲ್ಲಿ ಜೈಲಿಗೆ ಕಳುಹಿಸಬೇಕು ಎಂದು ಸೋಮವಾರ ಸೂಚಿಸಿದೆ.

ADVERTISEMENT

ಕ್ಷಮಾದಾನ ನೀಡುವ ವಿಚಾರದಲ್ಲಿ ಗುಜರಾತ್ ಸರ್ಕಾರವು ಮಹಾರಾಷ್ಟ್ರ ಸರ್ಕಾರದ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸ ಮಾಡಿದೆ ಎಂದು ತೀಕ್ಷ್ಣವಾಗಿ ಹೇಳಿದೆ. ಬಿಲ್ಕಿಸ್ ಪ್ರಕರಣದ ಅಪರಾಧಿಗಳಿಗೆ ಕ್ಷಮಾದಾನ ನೀಡಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರವಾಗಿ ಕೋರ್ಟ್‌ ನೀಡಿರುವ ಈ ತೀರ್ಪು ಗುಜರಾತ್ ಸರ್ಕಾರಕ್ಕೆ ಆಗಿರುವ ಭಾರಿ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ಮಹಿಳೆಯ ನಂಬಿಕೆಗಳು ಏನೇ ಇದ್ದಿರಲಿ, ಆಕೆಯ ಮತ ಯಾವುದೇ ಆಗಿರಲಿ, ‘ಮಹಿಳೆಯರನ್ನು ಗುರಿಯಾಗಿಸಿ ಹೇಯ ಅಪರಾಧ ಎಸಗಿದವರು ಕ್ಷಮಾದಾನಕ್ಕೆ ಅರ್ಹರೇ’ ಎಂಬ ಪ್ರಶ್ನೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರು ಇದ್ದ ವಿಭಾಗೀಯ ಪೀಠ ಕೇಳಿದೆ. ಗುಜರಾತ್ ಸರ್ಕಾರವು ಸೂಕ್ತ ರೀತಿಯಲ್ಲಿ ಆಲೋಚನೆಯನ್ನೇ ಮಾಡದೆ ಅವರಿಗೆ ಕ್ಷಮಾದಾನ ನೀಡಿತ್ತು ಎಂದು ಹೇಳಿದೆ.

ಅತ್ಯಾಚಾರಕ್ಕೆ ಗುರಿಯಾದಾಗ ಬಿಲ್ಕಿಸ್ ಅವರಿಗೆ 21 ವರ್ಷ ವಯಸ್ಸು. ಹತ್ಯೆಯಾದ ಏಳು ಮಂದಿ ಪೈಕಿ ಬಿಲ್ಕಿಸ್ ಅವರ ಮೂರು ವರ್ಷ ವಯಸ್ಸಿನ ಮಗಳೂ ಒಬ್ಬಳು. 11 ಮಂದಿ ಅಪರಾಧಿಗಳನ್ನು ಗುಜರಾತ್ ಸರ್ಕಾರವು 2022ರ ಆಗಸ್ಟ್‌ 15ರಂದು ಬಿಡುಗಡೆ ಮಾಡಿತ್ತು. ‘ಗುಜರಾತ್ ಸರ್ಕಾರವು ತನ್ನಲ್ಲಿ ಇಲ್ಲದಿದ್ದ ಅಧಿಕಾರವನ್ನು ಚಲಾಯಿಸಿದ ಕಾರಣಕ್ಕಾಗಿ ಕ್ಷಮಾದಾನ ಆದೇಶವನ್ನು ನಾವು ರದ್ದುಪಡಿಸುತ್ತಿದ್ದೇವೆ’ ಎಂದು ನ್ಯಾಯಪೀಠ ಹೇಳಿದೆ.

ಕ್ಷಮಾದಾನ ಆದೇಶ ಹೊರಡಿಸಬೇಕಿದ್ದುದು ಗುಜರಾತ್ ಸರ್ಕಾರದ ಕೆಲಸ ಅಲ್ಲವಾಗಿತ್ತು ಎಂದು ತೀರ್ಪಿನಲ್ಲಿ ಕೋರ್ಟ್‌ ಹೇಳಿದೆ. ಅಪರಾಧ ಎಸಗಿದವರ ವಿಚಾರಣೆ ನಡೆಸಿದ ಹಾಗೂ ಅವರನ್ನು ಶಿಕ್ಷೆಗೆ ಗುರಿಪಡಿಸಿದ ರಾಜ್ಯವು (ಮಹಾರಾಷ್ಟ್ರ) ಕ್ಷಮಾದಾನ ಕೋರಿದ ಮನವಿಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. 

‘ಇತರ ವಿಷಯಗಳ ಬಗ್ಗೆ ನಾವು ಗಮನಹರಿಸಬೇಕಾದ ಅಗತ್ಯ ಇರಲಿಲ್ಲ. ಆದರೆ, ಗಮನ ನೀಡುವ ಕೆಲಸ ಪೂರ್ತಿಯಾಗಬೇಕು ಎಂಬ ಕಾರಣಕ್ಕೆ ನಾವು ಆ ಕೆಲಸ ಮಾಡಿದ್ದೇವೆ. ಗುಜರಾತ್ ಸರ್ಕಾರವು ತನ್ನ ಬಳಿ ಇಲ್ಲದಿದ್ದ ಅಧಿಕಾರವನ್ನು ಚಲಾಯಿಸಿದೆ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಕಾರಣಕ್ಕಾಗಿಯೂ ಕ್ಷಮಾದಾನದ ಆದೇಶವು ರದ್ದುಪಡಿಸುವುದಕ್ಕೆ ಯೋಗ್ಯವಾಗಿದೆ’ ಎಂದು ಪೀಠವು ಹೇಳಿದೆ.

ಅಪರಾಧಿಗಳ ಪೈಕಿ ಒಬ್ಬ (ರಾಧೇಶ್ಯಾಮ್ ಶಾ) ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನ ಇನ್ನೊಂದು ನ್ಯಾಯಪೀಠವು 2022ರ ಮೇ 13ರಂದು ನೀಡಿದ್ದ ತೀರ್ಪನ್ನು ವಿಭಾಗೀಯ ಪೀಠವು ಅನೂರ್ಜಿತಗೊಳಿಸಿದೆ. ಆ ತೀರ್ಪನ್ನು ನ್ಯಾಯಾಲಯಕ್ಕೆ ವಂಚಿಸಿ, ವಾಸ್ತವ ಸಂಗತಿಗಳನ್ನು ಮರೆಮಾಚಿ ಪಡೆಯಲಾಗಿತ್ತು ಎಂದು ವಿಭಾಗೀಯ ಪೀಠ ಹೇಳಿದೆ.

2022ರ ಮೇ ತಿಂಗಳ ತೀರ್ಪಿನ ಬಗ್ಗೆ ಪುನರ್‌ ಪರಿಶೀಲನಾ ಅರ್ಜಿಯನ್ನು ಸಲ್ಲಿಸದ ಗುಜರಾತ್ ಸರ್ಕಾರದ ಕ್ರಮವನ್ನು ಕೋರ್ಟ್‌ ಕಟುವಾಗಿ ಟೀಕಿಸಿದೆ. ‘2022ರ ಮೇ ತಿಂಗಳ ತೀರ್ಪಿನ ಲಾಭ ಪಡೆದ ಇತರ ಅಪರಾಧಿಗಳು, ತಾವು ಕೂಡ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದರು. ಗುಜರಾತ್ ಸರ್ಕಾರವು ಅಪರಾಧಿಯೊಬ್ಬನ (ಪ್ರತಿವಾದಿ ಸಂಖ್ಯೆ 3) ಈ ತಪ್ಪು ಕೆಲಸದಲ್ಲಿ ತಾನೂ ಭಾಗಿಯಾಗಿತ್ತು. ವಾಸ್ತವಾಂಶಗಳನ್ನು ಮರೆಮಾಚಿ ಈ ಕೋರ್ಟ್‌ನ ದಾರಿ ತಪ್ಪಿಸಲಾಯಿತು’ ಎಂದು ವಿಭಾಗೀಯ ಪೀಠವು ಹೇಳಿದೆ.

ಬಿಲ್ಕಿಸ್‌ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಅಕ್ಟೋಬರ್ 12ರಂದು ಆದೇಶವನ್ನು ಕಾಯ್ದಿರಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.