ಅಹಮದಾಬಾದ್: 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯಲು ನಿರ್ದೇಶಿಸುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ.
ಗುಜರಾತ್‌ನ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ಕಾಂಗ್ರೆಸ್ ಶಾಸಕರು ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಅಪರಾಧಿಗಳನ್ನು ಬಿಡುಗಡೆ ಮಾಡಿರುವ ನಾಚಿಕೆಗೇಡಿನ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಶಾಸಕರಾದ ಗಯಾಸುದ್ದೀನ್ ಶೇಖ್, ಇಮ್ರಾನ್ ಖೇಡಾವಾಲ ಮತ್ತು ಜಾವೇದ್ ಪಿರಜಾದ್ ಜಂಟಿಯಾಗಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ. 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಕ್ರಮ ನಾಚಿಕೆಗೇಡಿನಿಂದ ಕೂಡಿದೆ, ಸಂವೇದನೆಯಿಲ್ಲದ್ದಾಗಿದೆ, ನ್ಯಾಯಕ್ಕಾಗಿ ಹೋರಾಡುತ್ತಿರುವವರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಬಿಲ್ಕಿಸ್ ಬಾನು ಮೇಲಿನ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಬಿಡುಗಡೆ ಮಾಡಲಾಗಿದೆ. ಆಗ ಬಿಲ್ಕಿಸ್ ಬಾನು ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಬಾನು ಅವರ ಮೂರು ವರ್ಷದ ಮಗು ಸೇರಿ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.