ADVERTISEMENT

ಬಿಲ್ಕಿಸ್ ಬಾನೊ ಪ್ರಕರಣ: ಗುಜರಾತ್ ಸರ್ಕಾರದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 26 ಸೆಪ್ಟೆಂಬರ್ 2024, 14:11 IST
Last Updated 26 ಸೆಪ್ಟೆಂಬರ್ 2024, 14:11 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವರ ಕುಟುಂಬದ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ನೀಡಲಾಗಿದ್ದ ಕ್ಷಮಾದಾನ ರದ್ದುಪಡಿಸುವ ಸಂದರ್ಭದಲ್ಲಿ ರಾಜ್ಯದ ವಿರುದ್ಧದ ಕೆಲವೊಂದು ಆಕ್ಷೇಪಣೆಗಳನ್ನು ಒಳಗೊಂಡ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿದ್ದ ಗುಜರಾತ್ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

2002ರ ಗುಜರಾತ್ ದಂಗೆಯಲ್ಲಿ ಗರ್ಭಿಣಿಯಾಗಿದ್ದ ಬಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಜತೆಗೆ ಅವರ ಕುಟುಂಬದ ಏಳು ಸದಸ್ಯರನ್ನು ಅವರ ಕಣ್ಣೆದುರೇ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವ ಗುಜರಾತ್ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಕೆಂಡಾಮಂಡಲವಾಗಿತ್ತು.

ADVERTISEMENT

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಉಜ್ಜಲ ಭುಯನ್ ಅವರಿದ್ದ ಪೀಠವು ಗುಜರಾತ್ ಸರ್ಕಾರದ ಮೇಲ್ಮನವಿಯ ವಿಚಾರಣೆ ನಡೆಸಿತು.

‘ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಪುನರ್ ಪರಿಶೀಲನಾ ಅರ್ಜಿಯನ್ನು ಕೂಲಂಕಶವಾಗಿ ಪರಿಶೀಲಿಸಲಾಗಿದೆ. ಆದೇಶವು ತೃಪ್ತಿದಾಯಕವಾಗಿದೆ. ದಾಖಲೆ ಆಧಾರದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಹಾಗೆಯೇ ಪುನರ್ ಪರಿಶೀಲಿಸಲು ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಈ ಕಾರಣಗಳಿಂದಾಗಿ ಪುನರ್‌ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯಾಲಯ ಹೇಳಿತು.

ಮತ್ತೊಂದು ಉನ್ನತ ನ್ಯಾಯಾಲಯದ ಪೀಠದ ಆದೇಶ ಪಾಲನೆಯನ್ನು ‘ಅಧಿಕಾರ ಮತ್ತು ವಿವೇಚಾನಾಧಿಕಾರದ ದುರುಪಯೋಗ’ ಹಾಗೂ ‘ದಾಖಲೆ ಆಧಾರದ ಮೇಲೆ ದೋಷ ಸ್ಪಷ್ಟವಾಗಿದೆ’ ಎಂದು ಜ. 8ರಂದು ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ ಎಂದು ಗುಜರಾತ್ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಹೇಳಿತ್ತು. ಇದನ್ನು ಪುನರ್‌ ಪರಿಶೀಲಿಸುವಂತೆ ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.